ಗೋಣಿಕೊಪ್ಪಲು, ಜು. ೧೫: ಜೀವನದ ಯಶಸ್ಸಿಗೆ ಪಠ್ಯದಲ್ಲಿನ ಅಂಕಗಳೇ ಮಾನದಂಡವಲ್ಲ. ಸಮಾಜಕ್ಕೆ ವ್ಯಕ್ತಿಯ ಕೊಡುಗೆಯೂ ಆತನ ವ್ಯಕ್ತಿತ್ವದ ಮಾನದಂಡವಾಗಿ ಪರಿಗಣಿಸಲ್ಪಡುತ್ತದೆ ಎಂದು ರೋಟರಿ ನಿಯೋಜಿತ ಗವರ್ನರ್ ಹೆಚ್.ಆರ್. ಕೇಶವ್ ಅಭಿಪ್ರಾಯಪಟ್ಟಿದ್ದಾರೆ.

ಗೋಣಿಕೊಪ್ಪಲು ರೋಟರಿ ಕ್ಲಬ್‌ನ ೨೨ನೇ ಅಧ್ಯಕ್ಷೆಯಾಗಿ ಜೆ.ಕೆ. ಶುಭಾಷಿಣಿ ಮತ್ತು ಕಾರ್ಯದರ್ಶಿ ಯಾಗಿ ಅರುಣ್ ತಮ್ಮಯ್ಯ ಅವರು ಪದಗ್ರಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಕಡಿಮೆ ಅಂಕ ಪಡೆದವರು ಕೂಡ ಮಹಾನ್ ವ್ಯಕ್ತಿಯಾಗಿ ಬದುಕಿನಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಉದಾಹರಣೆಗಳಿವೆ.

ರೋಟರಿಯಲ್ಲಿ ಪ್ರತಿಯೋರ್ವರೂ ನಾಯಕರೇ ಆಗಿದ್ದು ಎಲ್ಲರಲ್ಲೂ ನಾಯಕತ್ವದ ಗುಣವಿರುತ್ತದೆ. ರೋಟರಿಯಲ್ಲಿನ ಸಮಾಜಸೇವೆ ಎಂಬುದು ವೇತನವಿಲ್ಲದ ಕೆಲಸದಂತೆ ಎಂದು ಹೇಳಿದ ಕೇಶವ್, ಎಲ್ಲರಿಗೂ ನೆರವು ನೀಡುವುದು ಕಷ್ಟಸಾಧ್ಯವಾದ ಕೆಲಸವಾಗಿದ್ದರೂ ಅಗತ್ಯವುಳ್ಳವರನ್ನು ಗುರುತಿಸಿ ರೋಟರಿ ಸಂಸ್ಥೆಗಳು ನೆರವು ನೀಡಬೇಕೆಂದು ಕರೆ ನೀಡಿದರು.

ರೋಟರಿ ಸಹಾಯಕ ರಾಜ್ಯಪಾಲ ರತನ್ ತಮ್ಮಯ್ಯ ಮಾತನಾಡಿ, ರೋಟರಿ ಫೌಂಡೇಷನ್‌ಗೆ ಆರ್ಥಿಕ ಕೊಡುಗೆ ನೀಡುವ ಮೂಲಕ ಜಗತ್ತಿನ ಎಲ್ಲೆಡೆಯಲ್ಲಿ ನೆರವಿನ ಅಗತ್ಯವುಳ್ಳವರಿಗೆ ರೋಟರಿ ಸದಸ್ಯರು ಸಹಾಯಹಸ್ತ ಚಾಚುತ್ತಿದ್ದಾರೆ ಎಂದು ಶ್ಲಾಘಿಸಿದರು. ರೋಟರಿ ಗೋಣಿಕೊಪ್ಪಲುವಿನ ನೂತನ ಅಧ್ಯಕ್ಷೆ ಜೆ.ಕೆ. ಶುಭಾಷಿಣಿ, ಕಾರ್ಯದರ್ಶಿ ಅರುಣ್ ತಮ್ಮಯ್ಯ, ವಲಯ ಸೇನಾನಿ ನವೀನ್, ನಿಕಟಪೂರ್ವ ಅಧ್ಯಕ್ಷೆ ನೀತಾ ಕಾವೇರಮ್ಮ ವೇದಿಕೆಯಲ್ಲಿದ್ದರು. ಈ ಸಂದರ್ಭ ಗರ್ಭಿಣಿಗೆ ಆರೋಗ್ಯ ಸಿರಿ ಯೋಜನೆಯಡಿ ಪೌಷ್ಟಿಕ ಆಹಾರದ ಕಿಟ್, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪುಸ್ತಕಗಳು ಮತ್ತು ವನಸಿರಿ ಯೋಜನೆಯಡಿ ಸಸಿಗಳನ್ನು ಗೋಣಿಕೊಪ್ಪಲು ರೋಟರಿ ಸಂಸ್ಥೆಯಿAದ ವಿತರಿಸಲಾಯಿತು. ಮಾಜಿ ಉಪ ರಾಜ್ಯಪಾಲ ಡಾ. ಚಂದ್ರಶೇಖರ್, ಪಿ. ನಾಗೇಶ್, ಅನಿಲ್ ಎಚ್.ಟಿ. ಕೊಡಗು ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನೂತನ ಸಂಸ್ಥೆಯ ಖಜಾಂಚಿಯಾಗಿ ಕಿಶೋರ್ ಮಾದಪ್ಪ ಆಯ್ಕೆಯಾಗಿದ್ದಾರೆ. ವಿವಿಧ ಸಮಿತಿಗೆ ಆಯ್ಕೆ ನಡೆದಿದ್ದು, ಐಪಿಪಿ ನೀತಾ ಕಾವೇರಮ್ಮ, ಕ್ಲಬ್ ನಿರ್ದೇಶಕರಾಗಿ ಇಮ್ಮಿ ಉತ್ತಪ್ಪ, ವಿವಿಧ ಸಮಿತಿಗೆ ಕೆ.ಜೆ. ರಾಜೀವ್, ಟಿ.ಯು. ನರೇಂದ್ರ, ಪಿ.ಬಿ. ಪೂಣಚ್ಚ, ಎಂ.ಕೆ. ದಿನಾ, ಎಂ.ಕೆ. ಮಾಚಯ್ಯ, ರೀಟಾ ದೇಚಮ್ಮ, ಸಜನ್ ಚಂಗಪ್ಪ, ಡಾ. ಚಿಣ್ಣಪ್ಪ, ಡಾ. ಚಂದ್ರಶೇಖರ್, ಕೆ. ಕಾವೇರಪ್ಪ, ದಿಲನ್ ಚೆಂಗಪ್ಪ, ಜಮುನಾ, ಸುಭಾಷ್, ಪಿ.ಆರ್. ವಿಜಯ ಆಯ್ಕೆಯಾಗಿದ್ದಾರೆ.