ಶನಿವಾರಸಂತೆ, ಜು. ೧೪: ಮುಂಗಾರು ಮಳೆ ಆರಂಭವಾಯಿ ತೆಂದರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಪಟ್ಟಣದ ಸಂತೆ ಮಾರುಕಟ್ಟೆಗೆ ಬೆಳೆದ ಬೆಳೆಗಳನ್ನು ಮಾರಾಟಕ್ಕೆ ತರಲು ಹಿಂಜರಿ ಯುತ್ತಾರೆ. ಕಾರಣ, ಸತತ ಸುರಿಯುವ ಮಳೆಗೆ ಮಾರುಕಟ್ಟೆ ಸಂಪೂರ್ಣ ಕೆಸರುಮಯವಾಗಿ ಬಿಡುತ್ತದೆ. ವಾಹನಗಳ ಸಂಚಾರ, ನಿಲುಗಡೆ ತ್ರಾಸದಾಯಕವಾಗಿ, ರೈತರು, ವ್ಯಾಪಾರಿಗಳು, ಗ್ರಾಹಕರು ಕೆಸರಲ್ಲಿ ಜಾರಿ ಬಿದ್ದೆದ್ದು ನಗೆಪಾಟಲಿಗೀಡಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಗ್ರಾಮ ಪಂಚಾಯಿತಿಗೆ ವಾರ್ಷಿಕ ರೂ. ೭ ಲಕ್ಷ ಆದಾಯ ತಂದುಕೊಡುವ ಸಂತೆ ಮಾರುಕಟ್ಟೆ ಯಲ್ಲಿ ಶನಿವಾರದ ಸಂತೆಗೆ ೩-೪ ಹೋಬಳಿಗಳ ಗ್ರಾಮಸ್ಥರು ವ್ಯಾಪಾರಕ್ಕೆ, ಮಾರಾಟಕ್ಕೆ, ಖರೀದಿಗೆಂದು ಬರುತ್ತಾರೆ. ಕೆಸರುಮಯವಾಗಿ ಹದಗೆಟ್ಟ ರಸ್ತೆ, ಶೀಟುಗಳು ಒಡೆದುಹೋಗಿ ಸೋರುವ ಮಳಿಗೆಗಳು, ಬೀಡಾಡಿ ದನಗಳ ಹಾವಳಿ, ಗೊಬ್ಬರ, ತ್ಯಾಜ್ಯದ ರಾಶಿ ಇಂತಹ ದುಸ್ಥಿತಿಯಲ್ಲಿರುವ ಸಂತೆ ಮಾರುಕಟ್ಟೆಗೆ ಬಂದು ರೈತರು ಬೆಳೆ ಮಾರಾಟ ಮಾಡುವುದು ಹೇಗೆ? ವ್ಯಾಪಾರಿಗಳು, ಗ್ರಾಹಕರು ಖರೀದಿಸಲು ಬರುವುದು ಹೇಗೆ? ಎಂದು ಕೃಷಿಕರಾದ ಕೆ.ಟಿ. ಹರೀಶ್, ಕೆ.ಸಿ. ತಮ್ಮಯ್ಯ, ಎಂ.ಎಸ್. ವೀರೇಂದ್ರ, ಎಂ.ಕೆ. ರಸಿಕ, ಎಂ.ಕೆ. ತೇಜ್, ಎಂ.ಎA. ಲೋಕೇಶ್, ಅರುಣ್ ಮತ್ತಿತರರು ಪ್ರಶ್ನಿಸುತ್ತಾರೆ.

ಜಿಲ್ಲೆಯಲ್ಲೇ ಅತಿ ವಿಸ್ತಾರವಾದ ಸಂತೆ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ಮಾರುಕಟ್ಟೆಯಲ್ಲಿ ಸಂತೆಯ ದಿನ ಸಾವಿರಾರು ಮಂದಿ ವ್ಯಾಪಾರಕ್ಕೆ ಬಂದು ಹೋಗುತ್ತಾರೆ. ರೈತರು ಬೆಳೆದ ಶುಂಠಿ, ಹಸಿಮೆಣಸಿನ ಕಾಯಿ, ಬಾಳೆಕಾಯಿ, ದಗ್ಗಿಳ್ಳಿಕಾಯಿ ಯನ್ನು ಲೋಡುಗಟ್ಟಲೆ ತರುವಾಗ ವಾಹನ ನಿಲುಗಡೆ ವ್ಯವಸ್ಥೆ ಸರಿಯಿಲ್ಲದೆ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಾರೆ. ಮಾರುಕಟ್ಟೆ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು. ೧೯೮೦ ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಅಧಿಕಾರವಧಿಯಲ್ಲಿ ಅಂದಿನ ಮಾಜಿ ಪುರಸಭಾಧÀ್ಯಕ್ಷ ದಿವಂಗತ ಬಿ. ಗಂಗಪ್ಪ ಕರ್ಕೇರ ಅವರ ಪರಿಶ್ರಮ ದಿಂದ ನಿರ್ಮಾಣಗೊಂಡಿರುವ ಸಂತೆ ಮಾರುಕಟ್ಟೆ ಇಂದು ಹದಗೆಟ್ಟು ದುಸ್ಥಿತಿಯಲ್ಲಿದೆ ಎಂದು ಕೆಲ ರೈತರು ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.

- ನರೇಶ್