ಸೋಮವಾರಪೇಟೆ, ಜು. ೧೫: ಮಳೆಯ ಅಬ್ಬರ ಕೊಂಚ ತಗ್ಗಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಗಾಳಿಯ ಆರ್ಭಟ ಮುಂದುವರಿದಿದೆ. ಪರಿಣಾಮ ಅಲ್ಲಲ್ಲಿ ಮರಗಳು ಬಿದ್ದು, ಹಾನಿ ಸಂಭವಿಸುತ್ತಿದ್ದು, ಕಳೆದ ರಾತ್ರಿಯಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ.

ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಮರಗಳು ಉರುಳುತ್ತಿರುವ ಹಿನ್ನೆಲೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡು ಸಾರ್ವಜನಿಕರು ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಯಿತು. ವಿದ್ಯುತ್ ಸಂಪರ್ಕವನ್ನು ಮರು ಸ್ಥಾಪಿಸಲು ಸೆಸ್ಕ್ ಸಿಬ್ಬಂದಿಗಳು ಹರ ಸಾಹಸ ನಡೆಸುತ್ತಿದ್ದು, ಬೆಳಗ್ಗಿನಿಂದಲೂ ವಿದ್ಯುತ್ ಕಣ್ಣಾಮುಚ್ಚಾಲೆಯಾಟ ನಡೆಯಿತು.

ಕೆಲ ಸಮಯ ಬಿಡುವು ನೀಡುವ ವರುಣ ನಂತರ ತನ್ನ ಆರ್ಭಟ ಮುಂದುವರೆಸುತ್ತಿದ್ದು, ಇದರೊಂದಿಗೆ ವಾಯುವಿನ ಅಬ್ಬರವೂ ಹೆಚ್ಚಾಗಿರುವ ಹಿನ್ನೆಲೆ ಅಲ್ಲಲ್ಲಿ ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ೧೭೮ ಮಿ.ಮೀ., ಸೋಮವಾರಪೇಟೆಗೆ ೭೩.೬, ಶನಿವಾರಸಂತೆಗೆ ೩೮, ಕೊಡ್ಲಿಪೇಟೆಗೆ ೯೨ ಮಿ.ಮೀ. ಮಳೆಯಾಗಿದೆ.

ಭಾರೀ ಗಾಳಿ ಮಳೆಗೆ ದೊಡ್ಡಬ್ಬೂರು ಗ್ರಾಮದ ರೇಖ ರವಿ ಅವರಿಗೆ ಸೇರಿದ ವಾಸದ ಮನೆಯ ಮುಂಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಶೇ. ೭೦ರಷ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಗ್ರಾಮದ ಎನ್.ಟಿ. ಮೇದಪ್ಪ ಅವರ ಮನೆಯು ಶೇ.೭೦ರಷ್ಟು ಹಾನಿಯಾಗಿದೆ. ಯಡವನಾಡು ಗ್ರಾಮದ ರಾಮಯ್ಯ ಅವರ ವಾಸದ ಮನೆ ಮಳೆಗೆ ಕುಸಿದಿದ್ದು, ಶೇ.೪೫ರಷ್ಟು ನಷ್ಟವಾಗಿದೆ. ಪಟ್ಟಣದ ವೆಂಕಟೇಶ್ವರ ಬಡಾವಣೆಯ ಹೆಚ್.ಪಿ. ಸುರೇಶ್ ಅವರಿಗೆ ಸೇರಿದ ಮನೆಯು ಗಾಳಿ ಮನೆಗೆ ಕುಸಿದು ಶೇ.೨೦ರಷ್ಟು ನಷ್ಟವಾಗಿದೆ.

ಶನಿವಾರಸಂತೆ ಹೋಬಳಿಯ ಗೆಜ್ಜೆಹಣಕೋಡು ಗ್ರಾಮದ ಜಿ.ಆರ್. ಪ್ರಕಾಶ್ ಅವರ ಮನೆಗೆ ಹಾನಿಯಾಗಿದೆ. ಆಲೂರು ಸಿದ್ದಾಪುರದ ಸಾವಿತ್ರಿ ಅವರ ಮನೆ ಶೇ.೨೦ರಷ್ಟು ಹಾನಿಯಾಗಿದೆ. ಬೇಳೂರು ಗ್ರಾ.ಪಂ.ನ ಬಳಗುಂದ ಗ್ರಾಮದ ನೀಲಾ ಅವರಿಗೆ ಸೇರಿದ ಮನೆ ಕುಸಿತಗೊಂಡಿದೆ. ಸೀಗೇಮರೂರು ಗ್ರಾಮದ ಉಮೇಶ್, ಸಾಕಮ್ಮ ಅವರುಗಳ ಮನೆಗೆ ಹಾನಿಯಾಗಿದೆ. ಪಟ್ಟಣದ ಲೋರ‍್ಸ್ ಕಾಲೋನಿಯ ಕುಮಾರ್ ಅವರಿಗೆ ಸೇರಿದ ವಾಸದ ಮನೆಯ ಮೇಲ್ಛಾವಣಿ ಕುಸಿದು ನಷ್ಟ ಸಂಭವಿಸಿದೆ.

ಶಾAತಳ್ಳಿ ಹೋಬಳಿಯ ಹರಗ ಗ್ರಾಮದ ಹೆಚ್.ಎಸ್. ಮಹೇಶ್ ಅವರ ಮನೆಯ ಬಳಿ ಬರೆ ಕುಸಿದು ಆತಂಕ ತಂದೊಡ್ಡಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಉಮೇಶ್, ಕರಿಬಸವರಾಜು ಅವರುಗಳು ಭೇಟಿ ನೀಡಿದ್ದಾರೆ.

ಕೊತ್ತನಳ್ಳಿ ಗ್ರಾಮದ ಎನ್.ಟಿ. ಮೇದಪ್ಪ ಅವರ ಮನೆಯು ಮಳೆಗೆ ಹಾನಿಗೀಡಾಗಿದ್ದು, ಮನೆ ಮಂದಿಯನ್ನು ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ತಾಲೂಕು ಆಡಳಿತದಿಂದ ದಿನೋಪಯೋಗಿ ವಸ್ತುಗಳ ಕಿಟ್‌ಗಳನ್ನು ಕಂದಾಯ ಇಲಾಖಾಧಿಕಾರಿಗಳು ವಿತರಿಸಿದ್ದಾರೆ.ಇಲ್ಲಿನ ಆನೆಕೆರೆ ಬಳಿಯಲ್ಲಿರುವ ಅರಳಿ ಮರದ ಬೃಹತ್ ಕೊಂಬೆ ಕಳೆದ ಒಂದು ವಾರದ ಹಿಂದೆಯೇ ಮುರಿದು ಬಿದ್ದಿದ್ದು, ಇಲ್ಲಿಯವರೆಗೂ ಅದನ್ನು ತೆರವುಗೊಳಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಮರದ ಬುಡದಲ್ಲಿ ನಾಗರ ಕಲ್ಲುಗಳಿದ್ದು, ದಿನನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತದೆ. ಮರದ ಕೊಂಬೆ ಮುರಿದು ಮರದ ಬುಡಕ್ಕೆ ಹೊಂದಿಕೊAಡAತೆ ರಸ್ತೆಗೆ ಬಿದ್ದಿದೆ. ಇದರಿಂದ ಭಕ್ತಾದಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.