ವರದಿ: ಚಂದ್ರಮೊಹನ್
ಕುಶಾಲನಗರ, ಜು. ೧೫: ಕಳೆದ ೨ ವಾರಗಳಿಂದ ನಿರಂತರ ಸುರಿದ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿದು ಉಂಟಾಗಲಿದ್ದ ಸಂಭಾವ್ಯ ಪ್ರವಾಹ ಭೀತಿಯಿಂದ ನದಿ ತಟದ ಬಡಾವಣೆಗಳ ನಿವಾಸಿಗಳು ಸದ್ಯ ಆತಂಕದಿAದ ಹೊರ ಬರುವಂತಾಗಿದೆ.
ಜುಲೈ ಆರಂಭದಲ್ಲಿ ಜಿಲ್ಲೆಯಾದ್ಯಂತ ಸುರಿಯಲು ಪ್ರಾರಂಭಿಸಿದ ಮುಂಗಾರು ಮಳೆಯಿಂದ ಕಾವೇರಿ ಮತ್ತು ಹಾರಂಗಿ ತುಂಬಿ ತಗ್ಗು ಪ್ರದೇಶದ ನಾಗರಿಕರಿಗೆ ಪ್ರವಾಹದ ಭೀತಿ ಎದುರಾಗಿತ್ತು. ಭಾಗಮಂಡಲ ಸೇರಿದಂತೆ ವಿವಿಧೆಡೆ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದ ಮಳೆ ಸುರಿದ ಕಾರಣ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದರೆ, ಇತ್ತ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಸಂದರ್ಭ ಕುಶಾಲನಗರ ಪಟ್ಟಣ ಮತ್ತು ಕೊಪ್ಪ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಈ ಭಾಗದ ನಿವಾಸಿಗಳು ದಿಕ್ಕು ತೋಚದೆ, ಜನ ಜೀವನ ಬಹುತೇಕ ಅಸ್ತವ್ಯಸ್ತಗೊಳ್ಳುವಂತಾಗಿತ್ತು.
ಕಾವೇರಿ ನದಿಯಲ್ಲಿ ಎರಡು ಬಾರಿ ಅಪಾಯದ ಮಟ್ಟ ಮೀರಿ ನೀರು ಹರಿದು ಕುಶಾಲನಗರದ ಎರಡು ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು, ಸ್ಥಳೀಯ ಆಡಳಿತದ ಸೂಚನೆಯಂತೆ ಕೆಲವು ಮನೆಗಳನ್ನು ತೆರವುಗೊಳಿಸಿ ಸ್ಥಳಾಂತರಕ್ಕೆ ಕೂಡ ಸಿದ್ಧತೆ ನಡೆದಿತ್ತು. ಇತ್ತ ಹಾರಂಗಿ ಜಲಾಶಯಕ್ಕೆ ೧೦ ದಿನಗಳಲ್ಲಿ ೧೩.೭ ಟಿ.ಎಂ.ಸಿ ಪ್ರಮಾಣದ ನೀರು ಹರಿದು ಬಂದರೆ, ೧೨.೬ ಟಿ.ಎಂ.ಸಿ. ನೀರನ್ನು ನದಿಗೆ ಹರಿಸಲಾಗಿತ್ತು. ಜಲಾಶಯದಿಂದ ಗರಿಷ್ಠ ಪ್ರಮಾಣದ ನೀರನ್ನು ನದಿಗೆ ಹರಿಸುವ ಸಂದರ್ಭ ನದಿ ಪಾತ್ರದ ಜನತೆ ಮಾತ್ರ ಕಂಗಲಾಗಿದ್ದ ದೃಶ್ಯ ನಿತ್ಯ ಗೋಚರಿಸುತಿತ್ತು.
ಈ ನಡುವೆ ಕಾವೇರಿ ನದಿಯಲ್ಲಿ ಕೇವಲ ೨೪ ಗಂಟೆಗಳ ಅವಧಿಯಲ್ಲಿ ೧೨ ಅಡಿಗಳಷ್ಟು ನೀರು ಹರಿದು ನದಿ ತಟದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ೧೦ ದಿನಗಳ ಕಾಲ ನಿರಂತರವಾಗಿ ಹಾರಂಗಿ ಅಣೆಕಟ್ಟು ಮತ್ತು ಕಾವೇರಿ ಪಾತ್ರದ ಪ್ರಮುಖರೊಂದಿಗೆ ಸಂಪರ್ಕ ಸಾಧಿಸಿಕೊಂಡು ನದಿ ತಟದ ತಗ್ಗು ಪ್ರದೇಶಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾವೇರಿ ನದಿಯು ಉಕ್ಕಿ ಹರಿಯುತ್ತಿದ್ದ ಸಂದರ್ಭ ಹಾರಂಗಿ ಜಲಾಶಯದಿಂದ ಹಂತ ಹಂತವಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಅಣೆಕಟ್ಟು ಅಧಿಕಾರಿಗಳಿಗೆ ಸಲಹೆ, ಸೂಚನೆ, ನಿರ್ದೇಶನ ನೀಡಿದ ಕಾರಣ ಸಂಭಾವ್ಯ ಪ್ರವಾಹ ತಪ್ಪಿದೆ ಎನ್ನುತ್ತಾರೆ ಕುಶಾಲನಗರದ ನಿವಾಸಿಗಳು.
ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಳಿಸಿದ ನೀರು ಕಾವೇರಿ ನದಿ ನೀರಿನ ಹರಿವಿಗೆ ಅಡ್ಡಿ ಉಂಟಾಗಿ ಬಡಾವಣೆಗಳಿಗೆ ನೀರು ನುಗ್ಗುವದು ಶಾಸಕ ರಂಜನ್ ಅವರ ಕಾಳಜಿಯಿಂದ ತಪ್ಪಿದಂತಾಗಿದೆ ಎಂದು ಕುಶಾಲನಗರ ಪ್ರವಾಹ ವೇದಿಕೆಯ ಪ್ರಮುಖರಾದ ಕೊಡಗನ ಹರ್ಷ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಮುಂದಿನ ದಿನಗಳಲ್ಲಿ ಕೆಳಭಾಗದ ನದಿ ಪ್ರದೇಶಗಳಲ್ಲಿ ಹೂಳೆತ್ತುವ ಕಾಮಗಾರಿ ಜೊತೆಗೆ ನದಿಯಿಂದ ಮರಳು ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. ಹಾರಂಗಿ ಜಲಾಶಯದ ಹೂಳೆತ್ತುವ ಕಾಮಗಾರಿ ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದು, ಸರ್ಕಾರದಿಂದ ಅನುಮೋದನೆಯೊಂದಿಗೆ ಸಧ್ಯದಲ್ಲೇ ಚಾಲನೆ ದೊರಕಲಿದೆ ಎಂದು ತಿಳಿಸಿದ್ದಾರೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯನ್ನು ಪ್ರವಾಹ ಮುಕ್ತವನ್ನಾಗಿಸಲು ಈಗಾಗಲೇ ನದಿ ಸರ್ವೆ ಕಾರ್ಯ ನಡೆದಿದೆ ಎಂದು ತಿಳಿಸಿರುವ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚೆನ್ನಕೇಶವ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದಿದ್ದಾರೆ.