ಗೋಣಿಕೊಪ್ಪಲು, ಜು. ೧೫: ಕಾಡಾನೆಯೊಂದು ಗಿರಿಜನ ಕುಟುಂಬ ವಾಸವಿದ್ದ ಜೋಪಡಿ ಮೇಲೆ ದಾಳಿ ನಡೆಸಿ ಸಂಪೂರ್ಣ ಧ್ವಂಸಗೊಳಿಸಿದ ಘಟನೆ ಅಮ್ಮತ್ತಿ ಹೋಬಳಿಯ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ಗ್ರಾಮದ ಚೊಟ್ಟೆಪಾರೆಯಲ್ಲಿ ನಡೆದಿದೆ. ತಾ. ೧೩ ರಂದು ಜೇನುಕುರುಬರ ಲಕ್ಷಿö್ಮ ಹಾಗೂ ಶಿವ ಎಂಬವರ ಜೋಪಡಿ ಬಳಿ ಬಂದ ಮೂರು ಕಾಡಾನೆಗಳು ನಡು ರಾತ್ರಿಯ ವೇಳೆ ಮನೆಯ ಒಂದು ಭಾಗವನ್ನು ಬೀಳಿಸಿ ಅಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದು ತೆರಳಿತ್ತು. ಈ ವೇಳೆ ಮನೆಯಲ್ಲಿದ್ದವರು ಎಚ್ಚರಗೊಂಡು ವಿಪರೀತ ಮಳೆ ಗಾಳಿಯ ನಡುವೆ ಸಮೀಪದ ಮನೆಗೆ ತೆರಳಿ ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದರು.
ಇದೇ ಆನೆಯ ಗುಂಪು ತಾ. ೧೪ ರ ಮುಂಜಾನೆ ವೇಳೆ ಇದೇ ಮನೆಗೆ ಲಗ್ಗೆಯಿಟ್ಟು ಜೋಪಡಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಎಚ್ಚರಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಇದರಿಂದಾಗಿ ಆದಿವಾಸಿ ಕುಟುಂಬಕ್ಕೆ ನೆಲೆಸಲು ಸೂರು ಇಲ್ಲದಂತಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಉಪಟಳ ಅಧಿಕವಾಗಿದ್ದು ಈ ಭಾಗದ ಜನರು ಭಯದ ವಾತಾವರಣದಲ್ಲಿಯೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ಇದ್ದ ಗುಡಿಸಲು ಕೂಡ ನೆಲಸಮವಾಗಿರುವುದರಿಂದ ಕುಟುಂಬವು ಕಷ್ಟದಲ್ಲಿ ಸಿಲುಕಿದೆ. ಮನೆಯಲ್ಲಿದ್ದ ಬಹುತೇಕ ಆಹಾರ ಪದಾರ್ಥಗಳು ಆನೆಯ ಪಾಲಾಗಿದ್ದರೆ ಉಳಿದ ಪದಾರ್ಥಗಳು ಮಳೆಯಿಂದ ಹಾಳಾಗಿವೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿದರಾದರೂ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಹಸ್ತ ನೀಡಲಿಲ್ಲ. ಇದರಿಂದಾಗಿ ಕುಟುಂಬವು ಕಷ್ಟದಲ್ಲಿ ಇದ್ದೇವೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಾಹಿತಿ ತಿಳಿದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ್ ತನ್ನ ಸಹ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆದರೆ ಸ್ಥಳಕ್ಕೆ ತಕ್ಷಣ ಭೇಟಿ ನೀಡಬೇಕಾದ ವಿಪತ್ತು ಪರಿಹಾರ ಸಮಿತಿಯ ನೋಡಲ್ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ಅಲ್ಲದೆ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಕೂಡ ಸಕಾಲದಲ್ಲಿ ಭೇಟಿ ನೀಡದೆ ನಿರ್ಲಕ್ಷö್ಯ ವಹಿಸಿದ್ದಾರೆ. ಮಾಹಿತಿ ತಿಳಿದ ಪೊನ್ನಂಪೇಟೆ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಗಿರಿಜನ ಕುಟುಂಬಕ್ಕೆ ತಾತ್ಕಾಲಿಕವಾಗಿ ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ. ಎಲ್ಲವನ್ನು ಕಳೆದುಕೊಂಡ ಕುಟುಂಬ ಅಧಿಕಾರಿಗಳ ಸಹಾಯಕ್ಕಾಗಿ ಎದುರು ನೋಡುತ್ತಿದೆ.
-ಹೆಚ್.ಕೆ. ಜಗದೀಶ್