ಗೋಣಿಕೊಪ್ಪ ವರದಿ, ಜು. ೧೩: ಮೈತಾಡಿ ಗ್ರಾಮದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಆರು ಆನೆಗಳ ಹಿಂಡು ಕೃಷಿಕರನ್ನು ನಿದ್ದೆ ಗೆಡಿಸುವಂತೆ ಮಾಡಿದೆ. ಸ್ಥಳೀಯ ಕೃಷಿಕರಾದ ಮುಂಡಚಾಡೀರ, ಚಪ್ಪಂಡ, ಆಲತಂಡ, ನಾಗಂಡ, ಐಯಮಂಡ ಸೇರಿದಂತೆ ಸುತ್ತಲಿನ ಕೃಷಿಕರ ತೋಟಕ್ಕೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ.

ಬುಧವಾರ ಮುಂಜಾನೆ ೬.೧೫ ಗಂಟೆ ಸುಮಾರಿಗೆ ಮುಖ್ಯರಸ್ತೆಯಲ್ಲಿ ಆರು ಆನೆಗಳ ಹಿಂಡು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ತೆರಳಲು ಭಯ ಪಡುತ್ತಿದ್ದಾರೆ. ಕಾಫಿ ಗಿಡದ ರೆಂಬೆ ಮುರಿದು ನಾಶ ಮಾಡಿವೆ. ಅಡಿಕೆ, ತೆಂಗು ಮರ ಕಿತ್ತು ಹಾಕಿವೆ. ಮಳೆಯ ಪ್ರಮಾಣ ಕೂಡ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಗೆ ಕಾಡಾನೆಗಳನ್ನು ಓಡಿಸಲು ತೊಂದರೆಯಾಗುತ್ತಿದೆ. ಮಳೆ ಹಾಗೂ ಕತ್ತಲು ಇರುವುದರಿಂದ ಆನೆಗಳು ಕಾರ್ಯಾಚರಣೆ ತಂಡವನ್ನು ಹಿಮ್ಮೆಟ್ಟುವ ಆತಂಕ ಕೂಡ ಇದೆ. ಮಳೆಯಲ್ಲಿ ಪಟಾಕಿ ಸಿಡಿಸಲು ಕೂಡ ಕಷ್ಟವಾಗುತ್ತಿದ್ದು, ಆನೆಗಳು ಕಾಡಿಗೆ ಮುಖ ಮಾಡುತ್ತಿಲ್ಲ. ಇದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.