ಸೋಮವಾರಪೇಟೆ, ಜು.೧೩: ಒಂಟಿ ಮನೆಯ ಬಳಿ ಬಂದ ಒಂಟಿ ಸಲಗವೊಂದು ಮನೆಯ ಮೆಟ್ಟಿಲ ಬಳಿ ಆಗಮಿಸಿದ ಮಹಿಳೆಯನ್ನು ಎಳೆದು ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಸಮೀಪದ ಬೇಳೂರು ಬಸವನಹಳ್ಳಿಯ ಗುಡುಗೂರಿನಲ್ಲಿ ನಡೆದಿದ್ದು, ಕಾಡಾನೆಯ ದಾಳಿಗೆ ಸಿಲುಕಿದ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುಗೂರು ನಿವಾಸಿ, ಕೂಲಿ ಕಾರ್ಮಿಕ ಮಹಿಳೆ ಪಾರ್ವತಿ ಎಂಬವರೇ ಕಾಡಾನೆ ದಾಳಿಗೆ ಒಳಗಾಗಿ ಬದುಕುಳಿದು ಆಸ್ಪತ್ರೆಗೆ ಸೇರಿದವರು.
ಪಾರ್ವತಿ ಅವರ ಪತಿ ನಿಧನರಾಗಿದ್ದು, ಪುತ್ರ ಖಾಸಗಿ ಬಸ್ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ದಿನ ಮನೆಯಲ್ಲಿ ಇವರೋರ್ವರೇ ಇದ್ದು, ರಾತ್ರಿ ೯ ಗಂಟೆ ಸುಮಾರಿಗೆ ಮನೆಯ ಹೊರಭಾಗದಲ್ಲಿ ಶಬ್ದವಾಗಿದೆ. ಈ ಸಂದರ್ಭ ಬಾಗಿಲು ತೆಗೆದು ಹೊರಬಂದ ಪಾರ್ವತಿ ಅವರು ಮೆಟ್ಟಿಲ ಮೇಲೆ ನಿಂತು ನೋಡುತ್ತಿದ್ದಂತೆ, ಮುಂಭಾಗದಲ್ಲಿಯೇ ಇದ್ದ ಒಂಟಿ ಸಲಗ ತನ್ನ ಸೊಂಡಿಲಿನಿAದ ಇವರನ್ನು ಕೆಳಗೆ ಎಳೆದಿದೆ.
ಕತ್ತಲೆಯಲ್ಲಿ ಕೆಳಬಿದ್ದ ಪಾರ್ವತಿ ಅವರನ್ನು ಕಾಡಾನೆ ತುಳಿಯಲು ಪ್ರಯತ್ನಿಸಿದೆ. ಈ ಸಂದರ್ಭ ಜೋರಾಗಿ ಕಿರುಚಿಕೊಂಡ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಪಾರ್ವತಿ ಅವರ ಸೊಂಟ, ಕಾಲುಗಳಿಗೆ ತೀವ್ರ ಪೆಟ್ಟಾಗಿದೆ.
ಅಕ್ಕಪಕ್ಕ ಯಾವುದೇ ಮನೆಗಳು ಇಲ್ಲದೇ ಇರುವುದರಿಂದ ರಾತ್ರಿಯಿಡೀ ನೋವಿನೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿಯೇ ಕಾಲ ಕಳೆದಿದ್ದಾರೆ. ಇಂದು ವಿಷಯ ತಿಳಿದ ಗ್ರಾಮದ ಅಧ್ಯಕ್ಷ ಕುಶಾಲಪ್ಪ, ಗ್ರಾ.ಪಂ. ಸದಸ್ಯೆ ಸುಜಾತ ಅವರುಗಳು ಪಾರ್ವತಿ ಅವರ ಮನೆಗೆ ತೆರಳಿ ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದು, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಅವರ ಸಹಕಾರದಿಂದ ಪಾರ್ವತಿ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.