ಮಡಿಕೇರಿ, ಜು. ೧೩: ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಹಿಂದೂ ಕಾರ್ಯಕರ್ತರನ್ನು ಅನಾವಶ್ಯಕವಾಗಿ ರೌಡಿಶೀಟರ್ ಹಾಗೂ ಕಮ್ಯುನಲ್ ಗೂಂಡಾ ಪಟ್ಟಿಗೆ ಸೇರಿಸುವ ಪೊಲೀಸ್ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜಾಗರಣಾ ವೇದಿಕೆ, ಮುಂದಿನ ೧೫ ದಿನಗಳೊಳಗೆ ಈ ಪಟ್ಟಿಯಿಂದ ಕಾರ್ಯಕರ್ತರ ಹೆಸರುಗಳನ್ನು ತೆರವುಗೊಳಿಸದಿದ್ದರೆ ಹಾಗೂ ಅನಧಿಕೃತವಾಗಿ ಅವರುಗಳ ಮನೆಗಳಿಗೆ ನುಗ್ಗಿ ಬೆಳ್ಳಂಬೆಳಿಗ್ಗೆ ತೊಂದರೆ ಕೊಡುವುದು ಮುಂದುವರಿದರೆ, ಜಾಗರಣಾ ವೇದಿಕೆಯಿಂದ ಪ್ರತಿಭಟನೆ ನಡೆಸುವುದಾಗಿ ವೇದಿಕೆಯ ಮಂಗಳೂರು ವಿಭಾಗೀಯ ಸಂಯೋಜಕ ಮಹೇಶ್ ಅವರು ಎಚ್ಚರಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಚೆಟ್ಟಳ್ಳಿಯಲ್ಲಿ ಹಾಗೂ ಇತ್ತೀಚೆಗೆ ಕುಶಾಲನಗರದಲ್ಲಿ ಬೆಳಿಗ್ಗೆ ಸುಮಾರು ೫ ಗಂಟೆಗೆ ಕಾರ್ಯಕರ್ತರ ಮನೆಗೆ ಪೊಲೀಸರು ನುಗ್ಗಿ ಮನೆ ಹುಡುಕಬೇಕಾಗಿ ಒತ್ತಾಯಿಸಿದ್ದಾರೆ. ಇನ್ನಿತರ ಕಾರ್ಯಕರ್ತರಿಗೆ ಕರೆ ಮಾಡಿ ಠಾಣೆಗೆ ಬಂದು ಮುಚ್ಚಳಿಕೆ ಬಾಂಡ್ ನೀಡುವಂತೆಯೂ ತಿಳಿಸಿದ್ದಾರೆ. ಯಾವುದೇ ನೋಟೀಸ್ ಇಲ್ಲದೆ ದಿಢೀರನೆ ಕ್ರಮ ಕೈಗೊಳ್ಳುವ ಪೊಲೀಸರ ನಡೆ ಖಂಡನೀಯ. ಅಲ್ಲದೆ ಈ ಪೊಲೀಸರ ದಾಳಿಯ ಕುರಿತು ಸೋಮವಾರಪೇಟೆ ಡಿ.ವೈಎಸ್.ಪಿ ಅವರನ್ನು ಪ್ರಶ್ನಿಸಿದಾಗ ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ಮೇಲಾಧಿಕಾರಿಗಳ ಆದೇಶವಿಲ್ಲದೆ ಯಾವುದೋ ಕಾಣದ ಕೈಗಳು ಕಾರ್ಯಕರ್ತರ ವಿರುದ್ಧ ಕೆಲಸ ಮಾಡುತ್ತಿದೆ ಎಂದರು. ಅನಧಿಕೃತ ದಾಳಿಗೆ ನಿರ್ದೇಶನ ನೀಡುವ ಅಧಿಕಾರಿಗಳನ್ನು ಪತ್ತೆಹಚ್ಚಿ ಅವರುಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಗೋ ರಕ್ಷಿಸಿದರೆ ಕಾರ್ಯಕರ್ತರ ಮೇಲೇಯೇ ಕ್ರಮ..!

ರಾಜ್ಯಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಅಕ್ರಮ ಗೋಸಾಗಾಟವನ್ನು ತಡೆಯುವಲ್ಲಿ ಪೊಲೀಸರು ವಿಫಲವಾಗಿರುವ ಕಾರಣ ಕಾರ್ಯಕರ್ತರೇ ಸ್ವತಃ ಗೋ ಸಾಗಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಗೋ ಸಾಗಾಟದಲ್ಲಿ ತೊಡಗಿರುವವರ ವಶಕ್ಕೆ ಪಡೆದ ವಾಹನಗಳನ್ನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆಗೊಳಿಸಿ ಸಾಗಾಟ ತಡೆದ ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಹಾಗೂ ಕಮ್ಯುನಲ್ ಗೂಂಡಾ ಪ್ರಕರಣಗಳನ್ನು ದಾಖಲಿಸಿ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಹಿಂದಿನ ಸರಕಾರ ಅನುಸರಿಸುತ್ತಿದ್ದ ಈ ನಡವಳಿಯನ್ನು ಇಂದಿನ ಸರಕಾರ ಕೂಡ ಮುಂದುವರಿಸುತ್ತಿರುವುದು ವಿಷಾಧನೀಯ ಎಂದರು.

ವೇದಿಕೆಯ ಜಿಲ್ಲಾ ಸಂಯೋಜಕ ಅಜಿತ್ ಕುಕ್ಕೇರ ಅವರು ಮಾತನಾಡಿ ದೇಶದ ರಕ್ಷಣೆಗೆ ಪಣ ತೊಡುವ ಕಾರ್ಯಕರ್ತರ ಸೇವೆಯನ್ನು ತಡೆಯುವ ಹಕ್ಕು ಯಾವ ಇಲಾಖೆಗೂ ಇಲ್ಲ. ಆದ್ದರಿಂದ ತಕ್ಷಣಕ್ಕೆ ಕಾರ್ಯಕರ್ತರ ಹೆಸರುಗಳನ್ನು ರೌಡಿಶೀಟರ್, ಕಮ್ಯುನಲ್ ಗೂಂಡಾ ಪಟ್ಟಿಯಿಂದ ಜಿಲ್ಲಾ ವರಿಷ್ಠಾಧಿಕಾರಿ ಗಳು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಹಿಂದೂ ಜಾಗರಣಾ ವೇದಿಕೆಯ ಹೋರಾಟಕ್ಕೆ ಇಲಾಖೆ ಸಿದ್ದಿವಿರಬೇಕೆಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಹಿಂದೂ ಯುವ ವಾಹಿನಿಯ ಜಿಲ್ಲಾ ಸಂಯೋಜಕ ವಿನಯ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರುಗಳಾದ ಶಾಂತೆಯAಡ ತಿಮ್ಮಯ್ಯ, ಸುನಿಲ್ ಮಾದಾಪುರ, ಹಾಗೂ ಕಮಲ್ ಹಾಜರಿದ್ದರು.