ಚೆಟ್ಟಳ್ಳಿ, ಜು. ೧೩: ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಭಾಗದ ಜನರ ದಶಕಗಳ ಬೇಡಿಕೆಯಾಗಿದ್ದ ರಸ್ತೆ ಅಗಲೀಕರಣ ಮತ್ತು ಸಂಪರ್ಕ ರಸ್ತೆ ನಿರ್ಮಾಣದ ಬೇಡಿಕೆಯನ್ನು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್. ಪೊನ್ನಣ್ಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನೆರವೇರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎ.ಎಸ್. ಪೊನ್ನಣ್ಣ ಅವರು ಸಂಪಾಜೆ, ಚೆಂಬು, ಪೆರಾಜೆ ಹಾಗೂ ಕರಿಕೆ ಭಾಗದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಭೂಕಂಪನ ಜಾಗದ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಸಂಪಾಜೆ ಚೆಕ್ಪೋಸ್ಟ್ ಬಳಿ ಅವರನ್ನು ಸ್ವಾಗತಿಸಲಾಯಿತು. ಬಳಿಕ ಚೆಂಬು ಗ್ರಾಮದ ಬಾಲಂಬಿ ಬಳಿ ಚೆಂಬು ಗ್ರಾಮಸ್ಥರು ಅವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ, ಸರಕಾರ ಹಾಗೂ ಚುನಾಯಿತ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ಗ್ರಾಮಸ್ಥರ ಕೋರಿಕೆ ಮೇರೆಗೆ ಜನರ ಅನುಕೂಲಕ್ಕಾಗಿ ನೆರವೇರಿಸಿದ್ದೇನೆ ಎಂದು ಹೇಳಿದರು.
ಬಳಿಕ ಮಾತನಾಡಿದ ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಕಳೆದ ವರ್ಷ ಕೂಡ ಎ.ಎಸ್. ಪೊನ್ನಣ್ಣ ಅವರು ಚೆಂಬು ಗ್ರಾಮದ ಬೊಳುಗಲ್ಲು ಎಂಬ ಭಾಗಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ಹೊಸ ರಸ್ತೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಕೆಲಸ ಮಾಡಲು ಅವರಿಗೆ ಭಗವಂತ ಶಕ್ತಿ ನೀಡಲಿ ಎಂದು ಪೊನ್ನಣ್ಣ ಅವರೊಂದಿಗೆ ಮಾತನಾಡಿ, ಈ ರಸ್ತೆ ಮಾಡಿಸಿಕೊಡುವಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಸಹಕರಿಸಿದ್ದಾರೆ ಎಂದರು.
ಜೀವಿ ಗಣಪಯ್ಯ ಮಾತನಾಡಿ, ರಘುನಾಥ್ ಬಾಲಂಬಿ ೮/೧ ಸರ್ವೆ ನಂಬರ್ ಸಮಸ್ಯೆಯ ಬಗ್ಗೆ ಪೊನ್ನಣ್ಣ ಅವರಲ್ಲಿ ಹೇಳಿಕೊಂಡರು. ಇದರ ಬಗ್ಗೆ ವಿವರವಾಗಿ ತಿಳಿದು ಸೂಕ್ತ ಕ್ರಮಕೈಗೊಳ್ಳಲು ಚಿಂತಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಯೋಗೀಶ್ವರ್, ಉಪಾಧ್ಯಕ್ಷೆ ಶಶಿಕಲಾ ಕಟ್ಟೆಪಾರೆ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಮುಖಂಡರಾದ ಎನ್.ಸಿ. ಮನೋಹರ್, ಕೆ.ಸಿ. ಸುರೇಶ, ಭಾರತಿ ಕುಶಲ ಅಡಚಿಲ್ ಕಜೆ, ಮನು ಏಣಿಯಾರ, ಮಧು ಹೊಸೂರು, ಶಿವರಾಮ ಕೊಪ್ಪದ ಮತ್ತು ದಬ್ಬಡ್ಕ ಗ್ರಾಮದ ಯುವಕರು ಹಾಜರಿದ್ದರು.