ಕಡಂಗ, ಜು. ೧೨: ಸಮೀಪದ ಗ್ರಾಮಗಳಾದ ಅರಪಟ್ಟು ಪೊದವಾಡ, ಎಡಪಾಲ, ಕರಡ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಜೀವನ ಸಾಗುತ್ತಿದೆ.
ಈ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಮಳೆ ನೀರನ್ನೇ ಅವಲಂಬಿಸಿ ದಿನ ಕಳೆಯಲಾಗುತ್ತಿದೆ. ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ಶೇ. ೯೦ರಷ್ಟು ಜನರ ಮೊಬೈಲ್ ಚಾರ್ಜ್ ಕಡಿತಗೊಂಡಿದ್ದು, ನೆಟ್ವರ್ಕ್ ಸಮಸ್ಯೆ ಕೂಡ ಕಾಡುತ್ತಿದೆ.
ಕಡಂಗ ಪಟ್ಟಣದಿಂದ ಸುಮಾರು ೨೦೦ ಮೀಟರ್ ದೂರದಲ್ಲಿರುವ ವೀರಾಜಪೇಟೆ ತಾಲೂಕಿನ ಕಡಂಗಮುರೂರು ಚೌಕಿ, ಕಲ್ಲುಮೊಟ್ಟೆ ಗ್ರಾಮಗಳಲ್ಲಿ ಎಂದಿನAತೆ ವಿದ್ಯುತ್ ಸಂಪರ್ಕವಿದ್ದು, ಮಡಿಕೇರಿ ತಾಲೂಕಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಇಲಾಖೆಯ ಅಧಿಕಾರಿಗಳ ಜೊತೆ ಮೊಬೈಲ್ ಮುಖಾಂತರ ಸಂಪರ್ಕಿಸಿದಲ್ಲಿ ಟಿ.ಸಿ. ಹಾಳಾಗಿದೆ ಎಂದು ಮಾತ್ರ ಹೇಳಿ ಮತ್ತೆ ಯಾವುದೇ ರೀತಿಯ ಸ್ಪಂದನ ನೀಡದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಜಕಾರಿಯ, ಸುನಿಲ್ ಮತ್ತು ಇತರ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
- ನೌಫಲ್ ಕಡಂಗ