ಮಡಿಕೇರಿ, ಜು. ೧೨: ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿದೆ. ಜಿಲ್ಲಾಡಳಿತ ತ್ವರಿತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ೨೦೧೮ರಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವಾಗ ಕೆಲವೊಂದು ವೈಫಲ್ಯಗಳು ಉಂಟಾಯಿತು. ಅದನ್ನು ಮನದಲ್ಲಿಟ್ಟುಕೊಂಡು ಅಧಿಕಾರಿ ಗಳೊಂದಿಗೆ ಸಮನ್ವಯತೆ ವಹಿಸಿ ಪರಿಣಾಮಕಾರಿಯಾಗಿ ಈ ಬಾರಿ ಕೆಲಸ ಮಾಡುತ್ತಿದ್ದೇವೆ. ಹಾರಂಗಿ ಜಲಾಶಯದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಹೊರ ಹಾಗೂ ಒಳ
(ಮೊದಲನೇ ಪುಟದಿಂದ) ಹರಿವಿನ ಮೇಲೆ ನಿಗಾವಹಿಸಲಾಗಿದೆ. ಮರ ಹಾಗೂ ಬರೆ ಕುಸಿದರೆ ಅದನ್ನು ತೆರವು ಮಾಡಲು ಕ್ರಮವಹಿಸಲಾಗಿದೆ. ಸರಕಾರದಿಂದ ಪರಿಹಾರ ಮೊತ್ತ ಕೂಡ ಹೆಚ್ಚಿಸಲಾಗಿದೆ. ಕೊಡಗಿನ ಶಾಸಕರು ಇಲ್ಲಿನ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಸ್ಪಂದಿಸುವುದರ ಜೊತೆಗೆ ಸರಕಾರದ ಗಮನಕ್ಕೆ ತರುತ್ತಿದ್ದಾರೆ ಎಂದು ಅವರು, ಜಿಲ್ಲೆಯಲ್ಲಿ ೫೫ ಮನೆಗಳು ಭಾಗಶಃ, ೨ ಮನೆಗಳು ಪೂರ್ಣ ಹಾನಿ, ೩ ಸೇತುವೆಗಳು ಮಳೆಯಿಂದ ಹಾನಿಯಾಗಿವೆ ಎಂದು ಮಾಹಿತಿ ನೀಡಿದರು.
ಮಾಜಿ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ ಅವರು ರಾಜ್ಯ ಸರಕಾರ ಕೊಡಗನ್ನು ನಿರ್ಲ್ಯಕ್ಷಿಸಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ವಿಪಕ್ಷವಾಗಿ ಕಾಂಗ್ರೆಸ್ ರಾಜಕೀಯ ಮಾಡಲಿ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದೊಂದಿಗೆ ಕೈಜೋಡಿಸಲಿ. ಎಲ್ಲಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಳೆದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ಕೆಲವರಿಗೆ ಮನೆ ನೀಡಲು ಬಾಕಿ ಉಳಿದಿದೆ. ಇನ್ಫೋಸಿಸ್ ಸಂಸ್ಥೆ ವಹಿಸಿಕೊಂಡ ವಸತಿಗಳು ನಿರ್ಮಾಣ ಹಂತದಲ್ಲಿವೆ ಎಂದು ಹೇಳಿದ ಅವರು, ಜಂಗಲ್ ಕಟ್ಟಿಂಗ್ ಮಾಡದೆ ಕೆಲವೆಡೆ ಸಮಸ್ಯೆಯಾಗುತ್ತಿದೆ. ಜಿಲ್ಲಾಧಿಕಾರಿ ಭವನ ಎದುರಿನ ತಡೆಗೋಡೆಯಲ್ಲಿ ಉಬ್ಬು ಹಾಗೂ ಬಿರುಕು ಕಾಣಿಸಿಕೊಂಡಿರುವುದನ್ನು ತಜ್ಞರು ಪರಿಶೀಲಿಸಿದ್ದಾರೆ. ಏನೂ ಆಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹಾಜರಿದ್ದರು.