*ಗೋಣಿಕೊಪ್ಪ, ಜು. ೧೧: ಮಕ್ಕಳು ಪರಿಪೂರ್ಣ ಶಿಕ್ಷಣವನ್ನು ಪಡೆದುಕೊಂಡಾಗ ಭಾರತದ ಭವಿಷ್ಯ ಬೆಳಗಲಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ಒಂದು ಕೋಟಿ ಇಪ್ಪತೈದು ಲಕ್ಷದಲ್ಲಿ ನಬಾರ್ಡ್ ೨೪ರ ಅನುದಾನ ದಲ್ಲಿ ನಿರ್ಮಾಣವಾದ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು ನೂತನ ತರಗತಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಪಾಲಿಬೆಟ್ಟ ಗ್ರಾಮದಲ್ಲಿ ಪಿಯುಸಿ ತರಗತಿ ಪ್ರಾರಂಭಿಸಿ ಹಂತ ಹಂತವಾಗಿ ಕೊಠಡಿ ವ್ಯವಸ್ಥೆಯನ್ನು ಒದಗಿಸ ಲಾಗುತ್ತಿದೆ. ಖಾಸಗಿ ಕಾಲೇಜು ಗಳಿಗಿಂತ ಉನ್ನತ ಮಟ್ಟದ ಶಿಕ್ಷಣವನ್ನು ಸರ್ಕಾರಿ ಕಾಲೇಜುಗಳು ಒದಗಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡು ದೇಶದ ಭವಿಷ್ಯದ ಪ್ರಜೆಯಾಗಬೇಕು ಎಂದು ಕರೆ ನೀಡಿದರು.
ಪ್ರಸ್ತುತ ೧೬೪ ಮಕ್ಕಳ ಭವಿಷ್ಯವನ್ನು ಈ ಕಾಲೇಜು ರೂಪಿಸುತ್ತಿದ್ದು, ಅವರ ಅನುಕೂಲಕ್ಕೆ ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಾಗು ವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವೈದ್ಯ ಡಾ. ಸುಧಕರ್ ಶೆಟ್ಟಿ ಮತ್ತು ಗುತ್ತಿಗೆದಾರ ನಿರಂಜನ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನೇತ್ರ, ಉಪಾಧ್ಯಕ್ಷೆ ಮಾಳೇಟಿರ ಪವಿತ್ರಾ, ಸದಸ್ಯರುಗಳಾದ ವೆಂಕಟೇಶ್, ನಾಜೀರ್, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಕೊಲ್ಲಿರ ಬೋಪಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಷ್ಪರಾಜು, ಪ್ರಾಂಶುಪಾಲ ಶೈನಾ, ಅಧ್ಯಾಪಕ ಶಿವದಾಸ್, ನಿವೃತ್ತ ಪ್ರಾಂಶುಪಾಲ ಭವಾನಿ ಹಾಗೂ ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಧ್ಯಾಪಕರುಗಳು ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.