ಸೋಮವಾರಪೇಟೆ, ಜು.೧೧: ವಿದ್ಯುತ್ ತಂತಿ ಮುರಿದು ಬಿದ್ದ ಪರಿಣಾಮ ಮೇಯಲು ಬಿಟ್ಟಿದ್ದ ಜಾನುವಾರು ಸಾವನ್ನಪ್ಪಿರುವ ಘಟನೆ ಸಮೀಪದ ಯಡವನಾಡು ಗ್ರಾಮದಲ್ಲಿ ನಡೆದಿದೆ.

ಯಡವನಾಡು ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ರಸ್ತೆಯ ಬದಿಯಲ್ಲಿ ಮೇಯುತ್ತಿದ್ದ ಜಾನುವಾರು ಆಕಸ್ಮಿಕವಾಗಿ ತಂತಿಗೆ ಸಿಲುಕಿ ಸಾವನ್ನಪ್ಪಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನ ಸಂಚಾರ ಇರದೇ ಇದ್ದುದರಿಂದ ಮಾನವ ಪ್ರಾಣಹಾನಿ ತಪ್ಪಿದಂತಾಗಿದೆ.

ಯಡವನಾಡಿನ ಆಶಾ ಎಂಬವರಿಗೆ ಸೇರಿದ ಜಾನುವಾರು ಸಾವನ್ನಪ್ಪಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾನುವಾರಿನ ಮಾಲೀಕರಿಗೆ ತಕ್ಷಣ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ವಿದ್ಯುತ್ ತಂತಿಗಳನ್ನು ಸಮರ್ಪಕಗೊಳಿಸುವಂತೆ ಒತ್ತಾಯಿಸಿದ್ದಾರೆ.