ಮಡಿಕೇರಿ, ಜು.೯: ತೆರೆಮರೆಯಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಮಾಣಿಕರನ್ನು ಗುರುತಿಸಿ ಗೌರವಿಸುವ ಕಾರ್ಯ ರೋಟರಿಯಂಥ ಪ್ರತಿಷ್ಟಿತ ಸೇವಾ ಸಂಸ್ಥೆಗಳಿAದ ಆಗಬೇಕಾಗಿದೆ ಎಂದು ರೋಟರಿ ಜಿಲ್ಲೆ ೩೧೮೧ ನ ನಾಮನಿರ್ದೇಶಿತ ಗವರ್ನರ್ ವಿಕ್ರಂದತ್ತ ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ.ಸಿ.ಕಾರ್ಯಪ್ಪ, ಕಾರ್ಯದರ್ಶಿಯಾಗಿ ಸುದಯ್ ನಾಣಯ್ಯ ಮತ್ತು ತಂಡಕ್ಕೆ ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದ ವಿಕ್ರಂದತ್ತ, ಅನೇಕರು ತೆರೆಮರೆಯಲ್ಲಿ ಇದ್ದುಕೊಂಡೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಇಂಥ ತೆರೆಮರೆಯ ಶ್ರಮಜೀವಿಗಳನ್ನು ಗೌರವಿಸುವ ಕಾರ್ಯ ಇಂದಿನ ಅಗತ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.

ಪ್ರತೀಯೋರ್ವರೂ ತಾವು ಗಳಿಸಿದ ಒಟ್ಟು ಆದಾಯದಲ್ಲಿ ಕಿಂಚಿತ್ತಾದರೂ ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಸಮಾಜದ ಮೇಲಿರುವ ತಮ್ಮ ಕಳಕಳಿ ಹಾಗೂ ಬದ್ದತೆಯನ್ನು ತೋರಿಸುವಂತೆಯೂ ವಿಕ್ರಂದತ್ತ ಕಿವಿಮಾತು ಹೇಳಿದರು. ಅಗತ್ಯವುಳ್ಳವರಿಗೆ ಯಾರು ಸಕಾಲದಲ್ಲಿ ನೆರವು ನೀಡುತ್ತಾರೆಯೋ ಅಂಥ ವ್ಯಕ್ತಿಗಳಿಗೆ ಅಂಥ ನೆರವಿನಿಂದ ಆತ್ಮತೃಪ್ತಿಯೂ ದೊರಕುತ್ತದೆ ಎಂದೂ ಅವರು ಹೇಳಿದರು.

ರೋಟರಿ ಸಹಾಯಕ ಗವರ್ನರ್ ರತನ್ ತಮ್ಮಯ್ಯ ರೋಟರಿ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈ ರೋಟರಿ ವರ್ಷದಲ್ಲಿ ವಿದ್ಯಾಸಿರಿ, ಆರೋಗ್ಯ ಸಿರಿ, ವನಸಿರಿ, ಜಲಸಿರಿ ಎಂಬ ನಾಲ್ಕು ಯೋಜನೆಗಳನ್ನು ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪ್ರಕಾಶ್ ಕಾರಂತ್ ಜಾರಿಗೊಳಿಸುತ್ತಿದ್ದು, ಮಡಿಕೇರಿ ಯಲ್ಲಿಯೂ ಈ ಯೋಜನೆಗಳನ್ನು ರೋಟರಿ ಸಂಸ್ಥೆಗಳು ಫಲಪ್ರದವಾಗಿ ಜಾರಿಗೊಳಿಸಲಿದೆ ಎಂದರು. ರೋಟರಿಗೆ ಮಹಿಳಾ ಸದಸ್ಯೆಯರನ್ನು ಈ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ರತನ್ ಮಾಹಿತಿ ನೀಡಿದರು.

ವಲಯ ಸೇನಾನಿ ಎನ್ .ಡಿ.ಅಚ್ಚಯ್ಯ ರೋಟರಿ ಸಂಸ್ಥೆಯ ಇ - ವಾರ್ತಾ ಸಂಚಿಕೆ ಅನಾವರಣ ಗೊಳಿಸಿದರು. ನೂತನ ಅಧ್ಯಕ್ಷ ಕೆ.ಸಿ. ಕಾರ್ಯಪ್ಪ, ಕಾರ್ಯದರ್ಶಿ ಸುದಯ್ ನಾಣಯ್ಯ, ನಿಕಟಪೂರ್ವ ಕಾರ್ಯದರ್ಶಿ ಲಲಿತಾ ರಾಘವನ್ ವೇದಿಕೆಯಲ್ಲಿದ್ದರು. ನಿಕಟಪೂರ್ವ ಉಪರಾಜ್ಯಪಾಲ ಅನಿಲ್ ಎಚ್.ಟಿ. ಅವರನ್ನು ರೋಟರಿಯಲ್ಲಿನ ಉತ್ತಮ ಸೇವೆಗಾಗಿ ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಡಾ.ಎಂ.ಜಿ.ಪಾಟ್ಕರ್, ಡಾ.ಜಯಲಕ್ಷ್ಮಿ ಪಾಟ್ಕರ್, ಲಲಿತಾರಾಘವನ್, ಡಾ.ರಾಘವನ್ ದಂಪತಿ ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಆರ್ಥಿಕ ನೆರವು ನೀಡಿದರು.