ಕುಶಾಲನಗರ, ಜು.೯: ಸಮೀಪದ ಮಾದಾಪಟ್ಟಣ ಗ್ರಾಮದ ಅಂಚೆ ಕಚೇರಿಯಲ್ಲಿ ಪೋಸ್ಟ್ಮೆನ್ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಕಳೆದ ೧೫ ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.
ಪೋಸ್ಟ್ಮೆನ್ ಪಿ.ಎ.ಜಯಪ್ರಕಾಶ್ (೫೪) ನಾಪತ್ತೆಯಾದ ವ್ಯಕ್ತಿ. ಪತ್ನಿ ಬಸವನಹಳ್ಳಿ ನಿವಾಸಿ ತಾರಾಮಣಿ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪತಿ ಜೂನ್ ೨೦ರಂದು ಕೆಲಸಕ್ಕೆ ತೆರಳಿದವರು ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಕಚೇರಿಯಲ್ಲಿ ವಿಚಾರಿಸಿದ್ದು, ಜೂನ್ ೨೩ರ ತನಕ ಕೆಲಸಕ್ಕೆ ತೆರಳಿದ ಬಗ್ಗೆ ಮಾಹಿತಿ ಒದಗಿಸಿದ್ದಾರೆ, ಗೈರು ಹಾಜರಾಗಿರುವುದಾಗಿ ತಿಳಿಸಿದ್ದಾರೆ. ಜೂನ್ ೨೭ರಂದು ಮೈಸೂರಿನಿಂದ ಅಂಚೆ ಮೂಲಕ ಅವರ ಎಟಿಎಂ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನು ತನಗೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆ ಇದೇ ರೀತಿ ಮನೆಬಿಟ್ಟು ಹೋಗಿರುವ ಜಯಪ್ರಕಾಶ್ ಸ್ಪಲ್ಪ ದಿನಗಳ ನಂತರ ಮನೆಗೆ ಮರಳಿ ಬಂದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ನಾಪತ್ತೆಯಾಗಿರುವ ಜಯಪ್ರಕಾಶ್ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಜೂನ್ ೩೦ ರಂದು ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಜಯಪ್ರಕಾಶ್ ೫ ಅಡಿ ೬ ಇಂಚು ಎತ್ತರದ ಕೋಲುಮುಖ ಹೊಂದಿದ ವ್ಯಕ್ತಿಯಾಗಿದ್ದು, ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದು, ಕನ್ನಡ ಮತ್ತು ಅರೆಭಾಷೆ ಬಲ್ಲವರಾಗಿದ್ದಾರೆ. ಯಾರಿಗಾದರೂ ಸುಳಿವು ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ತಿಳಿಸುವಂತೆ ಕುಟುಂಬ ಸದಸ್ಯರು ಕೋರಿದ್ದಾರೆ. - ಸಿಂಚು