ಮಡಿಕೇರಿ, ಜು. ೯: ಗ್ರಾ.ಪಂ. ನೌಕರರಿಗೆ ಕನಿಷ್ಟ ವೇತನ ನಿಗದಿಮಾಡಬೇಕೆಂದು ಒತ್ತಾಯಿಸಿ ತಾ. ೧೩ ರಂದು ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ (ಸಿಐಟಿಯು) ವತಿಯಿಂದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ನವೀನ್ ಕುಮಾರ್, ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ ವೇತನ ಹೆಚ್ಚಳ ಮಾಡದ ಸರಕಾರ ದುಡಿಯುವ ವರ್ಗವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಗ್ರಾ.ಪಂ. ನೌಕರರಿಗೆ ಕನಿಷ್ಟ ವೇತನ ನಿಗದಿಪಡಿಸಬೇಕು, ತುಟ್ಟಿ ಭತ್ಯೆ ಮತ್ತು ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆ ಮಾಡಬೇಕು ಹಾಗೂ ನಿವೃತ್ತಿಯಾದ ನೌಕರಿಗೆ ಉಪಧನ ನೀಡಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.
ಸಂಘವು ಗ್ರಾ.ಪಂ.ಗಳಲ್ಲಿ ವಿವಿಧ ಕೆಲಸಗಳಲ್ಲಿ ದುಡಿಯುವ ನೌಕರರಿಗೆ ಕುಶಲತೆಯ ಆಧಾರದಲ್ಲಿ ``ಸಮಾನ ಕೆಲಸಕ್ಕೆ ಸಮಾನ ವೇತನ'' ನಿಗದಿಪಡಿಸುವುದು ಅತ್ಯಗತ್ಯ. ಅದೇ ರೀತಿಯಲ್ಲಿ ನೌಕರರ ಸೇವಾ ಅವಧಿಗೆ ಮಾನ್ಯತೆ ನೀಡುವ ರೀತಿಯಲ್ಲಿ ನಿಗದಿಪಡಿಸಲಾಗಿರುವ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು. ಹಣದುಬ್ಬರ ಶೇ.೭.೮ ರಷ್ಟಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಗ್ರಾ.ಪಂ. ನೌಕರರಾದ ಬಿಲ್ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ. ೩೮,೦೨೧, ವಾಟರ್ ಮ್ಯಾನ್, ಪಂಪ್ ಆಪರೇಟರ್ಗಳಿಗೆ ರೂ. ೩೩,೦೬೨, ಅಟೆಂಡರ್ಗಳಿಗೆ ರೂ. ೨೮,೭೫೦ ಹಾಗೂ ಸ್ವಚ್ಛತಾಗಾರರಿಗೆ ರೂ. ೨೫,೦೦೦ ನೀಡಬೇಕೆಂದು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ೨೦೨೨ ಜ. ೨೭ ರಂದು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಆದರೆ ಕನಿಷ್ಟ ವೇತನ ನಿಗದಿಗೆ ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸರಕಾರದ ನಿರ್ಲಕ್ಷö್ಯವನ್ನು ಖಂಡಿಸಿ ಮತ್ತು ವೇತನ ನಿಗದಿಗೆ ಒತ್ತಾಯಿಸಿ ತಾ. ೧೩ ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಪ್ರತಿಭಟನೆ ನಡೆಯಲಿದ್ದು, ಎಲ್ಲಾ ಗ್ರಾ.ಪಂ. ನೌಕರರು ಪಾಲ್ಗೊಳ್ಳಬೇಕೆಂದು ಭರತ್ ಮನವಿ ಮಾಡಿದ್ದಾರೆ.