ಮಡಿಕೇರಿ, ಜು. ೯: ಇತ್ತೀಚೆಗೆ ನಿಧನರಾದ ಪತ್ರಕರ್ತ, ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಮನು ಶೆಣೈ ನೆನಪಿನಲ್ಲಿ ತಾ. ೧೨ರಂದು ಬೆಳಿಗ್ಗೆ ೧೧ ಗಂಟೆಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು, ಸಮಾನ ಮನಸ್ಕರ ವೇದಿಕೆ ತಿಳಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖ ವಿ.ಪಿ. ಶಶಿಧರ್, ಅಂದು ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ, ಪ್ರಗತಿಪರರು, ಚಿಂತಕರು, ಹೋರಾಟಗಾರರು ಸೇರಿದಂತೆ ಸಮಾನ ಮನಸ್ಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಮನುಶೆಣೈ ತಮ್ಮ ಪತ್ರಿಕೆ ಮೂಲಕ ವಿಶಿಷ್ಟ ಓದುಗರ ಬಳಗವನ್ನು ಸೃಷ್ಟಿಸಿದ ಅವರು, ದಮನಿತರು, ಶೋಷಿತರ ಧ್ವನಿಯಾಗಿ ಪತ್ರಿಕೆಯನ್ನು ರೂಪಿಸಿದರು. ಕುಸಿದುಹೋಗಿದ್ದ ಅನೇಕ ಹೋರಾಟಗಳಿಗೆ ಮರುಜೀವ ನೀಡಿದರು. ದಿಡ್ಡಳ್ಳಿ, ಜಮ್ಮಾ ಭೂಮಿ, ಮರದ ಹಕ್ಕು, ಸೋಮವಾರಪೇಟೆ ದಲಿತ ಬಾಲಕಿಯ ಸಾವು ಇತ್ಯಾದಿ ಹೋರಾಟಗಳಲ್ಲಿ ಬದ್ಧತೆಯಿಂದ ಜೀವ ತುಂಬಿದರು ಎಂದು ಶಶಿಧರ್ ಹೇಳಿದರು. ಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಡಾ. ದುರ್ಗಾ ಪ್ರಸಾದ್, ಮುನೀರ್ ಅಹಮದ್, ಚೇರಂಡ ನಂದಾ ಸುಬ್ಬಯ್ಯ, ಕೆ.ಆರ್. ವಿದ್ಯಾಧರ್ ಹಾಗೂ ದಿವಾಕರ್ ಹಾಜರಿದ್ದರು.