ಮಡಿಕೇರಿ, ಜು. ೮: ಜಿಲ್ಲೆಯಲ್ಲಿ ವರ್ಷಧಾರೆಯ ಬಿರುಸು ಮುಂದುವರಿದಿದೆ. ಇದೀಗ ಮಳೆಯೊಂದಿಗೆ ಸಣ್ಣ ಪ್ರಮಾಣದ ಗಾಳಿಯೂ ಕಂಡು ಬರುತ್ತಿದ್ದು, ತೀರಾ ಚಳಿಯ ವಾತಾವರಣ ಉಂಟಾಗಿದೆ. ಜಿಲ್ಲಾ ಕೇಂದ್ರ ಮಂಜಿನ ನಗರಿ ಮಡಿಕೇರಿಯಲ್ಲಂತೂ ಮಂಜು ಮುಸುಕಿದ ಮಂದ ವಾತಾವರಣದೊಂದಿಗೆ ಮೈಕೊರೆಯುವ ಚಳಿಯ ಅನುಭವ ಜನತೆಗಾಗುತ್ತಿದೆ.

ಜಿಲ್ಲೆಯಾದ್ಯಂತ ಮಳೆ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಅಲ್ಲಲ್ಲಿ ಹಲವಾರು ರೀತಿಯ ಹಾನಿಗಳು ಉಂಟಾಗುತ್ತಿವೆ. ಕಾವೇರಿ ನದಿ ಸೇರಿದಂತೆ ಬಹುತೇಕ ಎಲ್ಲಾ ನದಿ - ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಶಾಲಾ - ಕಾಲೇಜು ವಿದ್ಯಾರ್ಥಿಗಳು ರಜೆ ಘೋಷಣೆಯಿಂದಾಗಿ ಮನೆಗಳಲ್ಲೇ ಉಳಿದಿದ್ದಾರೆ.

ನಿನ್ನೆ ಅಪರಾಹ್ನದಿಂದ ಮಳೆ ಒಂದಷ್ಟು ಹೆಚ್ಚು ಸುರಿದಿದೆ. ಪ್ರಸ್ತುತ ಹಿಂದಿನ ಬಿರುಸು ಇಳಿಮುಖವಾಗಿದ್ದರೂ ಮುಂಗಾರಿನ ಸನ್ನಿವೇಶ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಎರಡು ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೯೬ ಇಂಚು, ವೀರಾಜಪೇಟೆ ಯಲ್ಲಿ ೧.೩೯ ಹಾಗೂ ಸೋಮವಾರಪೇಟೆಯಲ್ಲಿ ೧.೬೦ ಇಂಚಿನಷ್ಟು ಸರಾಸರಿ ಮಳೆಯಾಗಿದೆ.

(ಮೊದಲ ಪುಟದಿಂದ) ಮಡಿಕೇರಿ ಕ.ಸ.ಬಾ ದಲ್ಲಿ ೩.೪೬, ನಾಪೋಕ್ಲು ೨.೨೮, ಸಂಪಾಜೆ ೨.೭೨, ಭಾಗಮಂಡಲ ೩.೪೦, ವೀರಾಜಪೇಟೆ ಕ.ಸ.ಬಾ ೨.೨೭, ಹುದಿಕೇರಿ ೦.೭೯, ಶ್ರೀಮಂಗಲ ೧.೬೫, ಪೊನ್ನಂಪೇಟೆ ೧.೩೨, ಅಮ್ಮತ್ತಿ ೧.೪೪ ಹಾಗೂ ಬಾಳೆಲೆ ಹೋಬಳಿಯಲ್ಲಿ ೦.೮೮ ಇಂಚು ಮಳೆಯಾಗಿದೆ.

ಸೋಮವಾರಪೇಟೆ ಕ.ಸ.ಬಾದಲ್ಲಿ ೧.೩೯, ಶನಿವಾರಸಂತೆ ೧.೦೪, ಶಾಂತಳ್ಳಿ ೩.೩೨, ಕೊಡ್ಲಿಪೇಟೆ ೧.೧೬, ಕುಶಾಲನಗರ ೦.೮೪, ಸುಂಟಿಕೊಪ್ಪ ೧.೮೮ ಇಂಚು ಮಳೆ ದಾಖಲಾಗಿದೆ.

ಹೆಬ್ಬಾಲೆ: ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲುಕೊಪ್ಪಲು ಗ್ರಾಮದಲ್ಲಿ ಗಾಳಿಮಳೆಗೆ ಮನೆಯೊಂದರ ಗೋಡೆ ಹಾಗೂ ಮೇಲ್ಛಾವಣಿ ಕುಸಿತಗೊಂಡಿದ್ದು, ಅದೃಷ್ಟವಶಾತ್ ವಯೋವೃದ್ಧೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಗಾಳಿ ಮಳೆಯಿಂದಾಗಿ ಗಡಿಗ್ರಾಮದ ಸಾಲುಕೊಪ್ಪಲು ನಿವಾಸಿ ವಯೋವೃದ್ಧೆ ಸುಮಿತ್ರಮ್ಮ ತಮ್ಮಣ್ಣ ಚಾರಿ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆಗಳು ಹಾಗೂ ಮೇಲ್ಚಾವಣಿ ಗುರುವಾರ ರಾತ್ರಿ ಕುಸಿದಿವೆ.ಮನೆಯ ಒಳಗಡೆ ಇದ್ದ ಸಾವಿತ್ರಮ್ಮ ಅವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಗೋಡೆ ಕುಸಿತದಿಂದ ಮನೆಯಲ್ಲಿದ್ದ ದಿನಸಿ,ಬಟ್ಟೆ ಹಾಗೂ ಪಾತ್ರೆಗಳಿಗೆ ಹಾನಿ ಉಂಟಾಗಿದೆ. ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗೀರಥಿ ಮತ್ತು ಸದಸ್ಯರು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಗ್ರಾ.ಪಂ.ಸದಸ್ಯರಾದ ಗೀತಾ, ಶ್ರೀಕಾಂತ್, ಬಸವರಾಜ. ಸರಿತಾ, ಪಂಚಾಯಿತಿ ಅಧಿಕಾರಿ ಹೇಮಲತಾ, ಗ್ರಾಮ ಲೆಕ್ಕಿಗ ಗುರುಪ್ರಸಾದ್, ಮಹೇಶ್ ಇದ್ದರು.

ಮಳೆಯಿಂದಾಗಿ ಕುಸಿಯುತ್ತಿರುವ ರಸ್ತೆ

ಸೋಮವಾರಪೇಟೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ‍್ಲಳ್ಳಿ ಸಂಪರ್ಕ ರಸ್ತೆಯ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಕಳೆದ ಹಲವು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆ ಶುಂಠಿ ಮಂಗಳೂರು-ಕರ‍್ಲಳ್ಳಿ-ಬೀಟಿಕಟ್ಟೆ ಸಂಪರ್ಕ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಇದರೊಂದಿಗೆ ರಸ್ತೆಯ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದ್ದು, ತಡೆಗೋಡೆ ನಿರ್ಮಾಣವಾಗದಿದ್ದರೆ ಕರ‍್ಲಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳಲಿದೆ.

ಗ್ರಾಮದ ಪವನ್ ಅವರ ಮನೆಯಿಂದ ಅನತಿ ದೂರದಲ್ಲಿ ೩೦ ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟಿದೆ. ಈಗಾಗಲೇ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆಯ ಒಂದು ಬದಿಗೆ ಚರಂಡಿ ನಿರ್ಮಿಸಲಾಗಿದೆ. ಮತ್ತೊಂದು ಬದಿಯಲ್ಲಿ ಇಳಿಜಾರಿದ್ದು, ಇಲ್ಲಿಗೆ ಸುಮಾರು ೨೦ ಮೀಟರ್‌ನಷ್ಟು ತಡೆಗೋಡೆ ನಿರ್ಮಾಣವಾಗದಿದ್ದರೆ ಇಡಿ ರಸ್ತೆ ಕುಸಿದು ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಕೃಷಿಕರು ಹಾಗೂ ಕೂಲಿ ಕಾರ್ಮಿಕರೇ ಇರುವ ಗ್ರಾಮದಲ್ಲಿ ರಸ್ತೆ ಸಂಪರ್ಕ ಅತಿ ಅವಶ್ಯವಿದ್ದು, ತಮ್ಮ ಕೃಷಿ ಪ್ರದೇಶ ಹಾಗೂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಇದೇ ಪ್ರಮುಖ ಮಾರ್ಗವಾಗಿದೆ. ಇದೀಗ ಗದ್ದೆ, ತೋಟ ಕೆಲಸಗಳು ನಡೆಯಬೇಕಿದ್ದು, ಒಂದು ವೇಳೆ ರಸ್ತೆ ಕುಸಿದರೆ ಇಡೀ ಗ್ರಾಮವೇ ಸಂಪರ್ಕ ಕಡಿದುಕೊಳ್ಳಲಿದೆ. ತಕ್ಷಣ ಸಂಬAಧಪಟ್ಟವರು ಈ ಬಗ್ಗೆ ಗಮನ ಹರಿಸಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಅಜ್ಜಳ್ಳಿ ನವೀನ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.ಸಿದ್ದಾಪುರ: ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತೊಮ್ಮೆ ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿತೀರದ ನೂರಾರು ನಿವಾಸಿಗಳಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ.ಯೋಗಾನಂದ್ ಹಾಗೂ ನೋಡೆಲ್ ಅಧಿಕಾರಿ ಪ್ರಮೋದ್ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್ ಮೂಲಕ ಗ್ರಾಮ ಸಹಾಯಕ ಕೃಷ್ಣ, ಗ್ರಾ.ಪಂ. ಬಿಲ್‌ಕಲೆಕ್ಟರ್ ಈಶ್ವರ ಮನೆ ಮನೆಗೆ ತೆರಳಿ ನೋಟೀಸ್ ಜಾರಿ ಮಾಡಿದರು. ಅಲ್ಲದೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು.

ಸಿದ್ದಾಪುರ: ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಂಡAಗೇರಿ ಗ್ರಾಮದ ಏಲಿಯಂಗಡಿಯಲ್ಲಿ ಬರೆ ಕುಸಿದಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್‌ಕುಮಾರ್, ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಹಾಲುಗುಂದ ಗ್ರಾ.ಪಂ ಪಿಡಿಓ ಕಾಂಚನ, ಬಿಲ್ ಕಲೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಮಳೆಯ ಅಬ್ಬರ ತಗ್ಗಿದೆ. ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಹಲವೆಡೆ ಸಂಪರ್ಕ ಸಾಧ್ಯವಾಗಿದೆ. ಸಮೀಪದ ಚೆರಿಯಪರಂಬು-ಕಲ್ಲುಮೊಟ್ಟೆ, ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಗಳು ತೆರವಾಗಿದ್ದು ವಾಹನಗಳ ಸಂಚಾರ ಸಾಧ್ಯವಾಗಿದೆ.

ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಅಲ್ಲಲ್ಲಿ ಹಾನಿ ಉಂಟಾಗಿದೆ. ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದ ಸಣ್ಣಮನೆ ಸಕೇಶ್ ಕುಮಾರ್ ಅವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ, ಪಿಡಿಓ ಉದಯ, ಗ್ರಾಮಲೆಕ್ಕಿಗ ಮಹಾನಂದ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಗಡೇರ ಮುತ್ತಪ್ಪ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ಶನಿವಾರಸಂತೆ : ಸಮೀಪದ ರಾಮನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ವಿನೂತ್ ಕುಮಾರ್ ಅವರ ಮನೆಯ ಮೇಲೆ ಶುಕ್ರವಾರ ಬೀಟೆ ಮರ ಬಿದ್ದು ಹಾನಿಯಾಗಿದ್ದು, ಮನೆಯ ಮೇಲ್ಚಾವಣಿ ಕುಸಿದು, ಹೆಂಚು ಒಡೆದು ಗೋಡೆ ಬಿರುಕುಬಿಟ್ಟಿದೆ. ವಿನೂತ್‌ಕುಮಾರ್ ಕೆಲಸಕ್ಕೆ ಹೋಗಿದ್ದು, ಅವರ ಅಜ್ಜಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಮರ ಬಿದ್ದಿದೆ. ಶಬ್ದ ಕೇಳಿ ಅಜ್ಜಿ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಹಾಗೂ ಕಾರ್ಯಕರ್ತರು ವಿಚಾರ ತಿಳಿಸಿದ ಮೇರೆಗೆ ಶನಿವಾರಸಂತೆ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ರಜಾಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿನೂತ್‌ಕುಮಾರ್ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಬಿಡುವು ನೀಡುತ್ತಾ ಸಾಧಾರಣವಾಗಿ ಸುರಿಯುತ್ತಿದ್ದು, ಗಾಳಿಯ ರಭಸ ಹೆಚ್ಚಾಗಿದೆ. ಅಲ್ಲಲ್ಲಿ ಮರಗಳು ನೆಲಕಚ್ಚುತ್ತಿವೆ.ಸಿದ್ದಾಪುರ: ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳಿಗೆ ಕಂದಾಯ ಇಲಾಖೆ ವತಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ನೋಟೀಸ್ ಜಾರಿ ಮಾಡಲಾಯಿತು. ಶುಕ್ರವಾರದಂದು ಗ್ರಾಮ ಲೆಕ್ಕಿಗ ಮುತ್ತಪ್ಪ, ಓಮಪ್ಪ ಬಣಕರ್ ಗ್ರಾಮ ಸಹಾಯಕ ಬಸವರಾಜ್ ಮನೆ ಮನೆಗಳಿಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹಾಗೂ ಪರಿಹಾರ ಕೇಂದ್ರಕ್ಕೆ ತೆರಳಲು ಸೂಚನೆ ನೀಡಿದರು.ಮಡಿಕೇರಿ: ಮಡಿಕೇರಿಯ ರೇಸ್‌ಕೋರ್ಸ್ ರಸ್ತೆಯ ಸಾಯಿ ಕ್ರೀಡಾಂಗಣದ ಎದುರಿನ ರಸ್ತೆ ಬದಿ ಕುಸಿತಗೊಂಡಿದೆ. ರಸ್ತೆಯ ಕೆಳ ಬದಿ ತೋಡು ಹರಿಯುತ್ತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.