ಮಡಿಕೇರಿ, ಜು. ೮: ಬಿ. ಶೆಟ್ಟಿಗೇರಿ -ಕೂಟಿಯಾಲ-ಬಿರುನಾಣಿ, ಕರಿಕೆ-ಪಟ್ಟಿತೊಡಿಕಾನ, ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣದ ಸಂಬAಧ ಎದುರಾಗಿರುವ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮಳೆಗಾಲದ ಬಳಿಕ ಸರ್ವೆ ನಡೆಸಲು ಅಧಿಕಾರಿಗಳಿಗೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹುಕಾಲದ ಬೇಡಿಕೆಯಾಗಿರುವ ಈ ಮೂರು ರಸ್ತೆಗಳ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಹಿನ್ನೆಲೆ ಬೇಡಿಕೆ ಕಾರ್ಯಗತಗೊಂಡಿಲ್ಲ. ಈ ರಸ್ತೆಗಳ ಸಂಪರ್ಕದಿAದ ಆಯಾ ಗ್ರಾಮದ ಜನರಿಗೆ ಅನುಕೂಲವಾಗಿದೆ. ಜೊತೆಗೆ ಕೂಟಿಯಾಲ ರಸ್ತೆಯ ಬಗೆಯೂ ಕ್ರಮದ ಅಗತ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ವಿದ್ಯುತ್ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ

ಮಳೆಗಾಲ ಬಿರುಸು ಪಡೆದು ಕೊಂಡ ಹಿನ್ನೆಲೆ ಜಿಲ್ಲೆಯಲ್ಲಿ ಸೃಷ್ಟಿ ಯಾಗಿರುವ ವಿದ್ಯುತ್ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ತಡ ಮಾಡಬಾರದು ಎಂದು ಪ್ರತಾಪ್ ಸಿಂಹ ಚೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂಬAಧ ಮಾಹಿತಿ ನೀಡಿದ ಅಧಿಕಾರಿ ಅಶೋಕ್,

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ೮೦ ಟ್ರಾನ್ಸ್ಫಾರಂಗಳು, ೩೬ ಕಿ.ಮೀ. ವಿದ್ಯುತ್ ತಂತಿ, ೯೪೨ ಕಂಬಗಳು ದಾಸ್ತಾನಿವೆ. ಜೊತೆಗೆ ೪೮ ಲೈನ್‌ಮೆನ್‌ಗಳು ನೇಮಕಗೊಂಡಿದ್ದಾರೆ. ಇದರಲ್ಲಿ ೧೭ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ೧೪ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ೭೭ ಗ್ಯಾಂಗ್‌ಮೆನ್‌ಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯ ವಿದ್ಯುತ್ ಗುತ್ತಿಗೆದಾರರ ಮೂಲಕವೂ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಳೆಗಾಲದ ಸಂದರ್ಭದಲ್ಲಿ ಲೈನ್‌ಮೆನ್‌ಗಳನ್ನು ವರ್ಗಾವಣೆ ಗೊಳಿಸಿರುವ ಬಗ್ಗೆ ಶಾಸಕ ರಂಜನ್ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆÀ ದಾಸ್ತಾನಿರುವ ವಿದ್ಯುತ್ ಕಂಬಗಳನ್ನು ಅವಶ್ಯಕತೆ ಇರುವ ಕಡೆ ಹಂಚಲು ಸೂಚಿಸಿದರು.

ಒತ್ತಡದ ಹಿನ್ನೆಲೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಪ್ರತಾಪ್ ಸಿಂಹ ಮಾತನಾಡಿ, ಶಾಸಕರುಗಳ ಗಮನಕ್ಕೆ ತಂದು ವರ್ಗಾವಣೆಗೆ ಆದೇಶಿಸಬೇಕು. ಜಿಲ್ಲೆಯ ಪರಿಸ್ಥಿತಿ ಅರಿತು ಕೆಲಸ ಮಾಡಿ ಎಂದು ಖಾರವಾಗಿ ನುಡಿದರು.

ಬಾಳೆಲೆಗೆ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಮನವಿ ಮಾಡಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಾಗ ಒದಗಿಸಿದರೆ ಉಪಕೇಂದ್ರ ಸ್ಥಾಪನೆ ಸಾಧ್ಯ ಎಂದರು.

ಶಾಸಕ ರಂಜನ್ ಮಾತನಾಡಿ, ಸೋಮವಾರಪೇಟೆ ಹಾಗೂ ಮಾದಾಪುರದಲ್ಲಿ ಉಪಕೇಂದ್ರ ನಿರ್ಮಿಸಲು ತಡವಾಗುತ್ತಿರಲು ಕಾರಣವೇನು? ಎಂದು ಪ್ರಶ್ನಿಸಿದರು. ಕಾಕೋಟುಪರಂಬು ಗ್ರಾ.ಪಂ. ಅಧ್ಯಕ್ಷ ಗಿರೀಶ್ ಮಾತನಾಡಿ, ಬೀಳುವ ಹಂತದಲ್ಲಿರುವ ಕಂಬವನ್ನು ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ಕ್ರಮಕೈಗೊಳ್ಳುತ್ತಿಲ್ಲ. ಜಂಗಲ್ ಕಟ್ಟಿಂಗ್ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಸೋಮವಾರಪೇಟೆಯಲ್ಲಿ ಕಂಬಗಳನ್ನು ಅವಶ್ಯವಿರುವ ಗ್ರಾಮಗಳಿಗೆ ಸಾಗಿಸಲು ಅಲ್ಲಿನ ಗ್ರಾಮಸ್ಥರನ್ನು ಕರೆಸಿಕೊಂಡು ಅವರಿಂದ ಸ್ಥಳಾಂತರ ಕೆಲಸ ಮಾಡಿಸಲಾಗುತ್ತಿದೆ ಎಂದು ಚೆಸ್ಕಾಂ ವಿರುದ್ಧ ಹರಿಹಾಯ್ದರು. ಸೋಮವಾರಪೇಟೆ ಜೆಇ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಯ ಅಮಾನತ್ತಿಗೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಮಳೆಯ ಪ್ರಮಾಣ ಹೆಚ್ಚಿದೆ. ನಿರಂತರವಾಗಿ ‘ಆರೆಂಜ್ ಅಲರ್ಟ್’ ಘೋಷಣೆಯಾಗುತ್ತಿದೆ. ೧ ಮನೆ ಪೂರ್ಣ ಹಾನಿ ಸೇರಿದಂತೆ ೪೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಅವರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಮಳೆಯಿಂದ ಇಬ್ಬರು ಗಾಯಗೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ಜಾನುವಾರು ಬಲಿಯಾಗಿದೆ. ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ರಸ್ತೆಗಳ ಬದಿಯಲ್ಲಿ ಜಾರಿರುವ ಮಣ್ಣುಗಳನ್ನು ಕ್ಷಿಪ್ರಗತಿಯಲ್ಲಿ ತೆರವು ಮಾಡಲಾಗುತ್ತಿದೆ. ಜಿಲ್ಲಾಡಳಿತ ಭವನ ಎದುರಿನ ತಡೆಗೋಡೆ ಉಬ್ಬು ಹಾಗೂ ಬಿರುಕು ಕಾಣಿಸಿಕೊಂಡ ಸಂಬAಧ ಪರಿಶೀಲನೆ ನಡೆಸಿ ಸಂಬAಧಿಸಿದವರನ್ನು ಕರೆಸಿ ಸಮಾಲೋಚನೆ ನಡೆಸಲಾಗಿದೆ. ಭಾರಿ ವಾಹನ ಸಂಚಾರ ನಿಷೇಧ ಸಂಬAಧ ಆದೇಶ ಹೊರಡಿಸಲಾಗುವುದು ಎಂದು ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮಳೆೆಹಾನಿಯನ್ನು ಸರಿಯಾಗಿ ಪರಿಶೀಲಿಸಿ ವರದಿ ನೀಡಬೇಕು. ಜಿಲ್ಲಾಡಳಿತ ಭವನ ಎದುರಿನ ತಡೆಗೋಡೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ನೀರು ಸೇರದಂತೆ ಕೆಲಸ ಮಾಡಬೇಕಿತ್ತು ಎಂದರು. ಶಾಸಕರಾದ ರಂಜನ್ ಹಾಗೂ ಬೋಪಯ್ಯ ಕೂಡ ಕಾಮಗಾರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾತನಾಡಿ, ಕಾಮಗಾರಿ ಸಂದರ್ಭ ಮಳೆ ಹೆಚ್ಚಾದ ಹಿನ್ನೆಲೆ ಮಳೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ವರದಿ ನೀಡಲಾಗಿದೆ ಎಂದು ಉತ್ತರಿಸಿದರು.

ರಂಜನ್ ಮಾತನಾಡಿ, ಗುತ್ತಿಗೆ ಪಡೆದ ಸಂಸ್ಥೆಗೆ ನೋಟೀಸ್ ನೀಡಿ. ಇಲ್ಲ ತಾನು ಪಿಟಿಷನ್ ಕಮಿಟಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದರು.

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಮಾತನಾಡಿ, ಕೆ. ನಿಡುಗಣೆಯಲ್ಲಿ ಇರುವ ಗೋಮಾಳ ಜಾಗವನ್ನು ಉಳಿಸಿಕೊಳ್ಳಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಜಲಜೀವನ್ ಮಿಷನ್ ಅನುಷ್ಟಾನ, ಕೋವಿಡ್ ಪರಿಸ್ಥಿತಿ, ಆರೋಗ್ಯ ಇಲಾಖೆಯ ಕೆಲಸಗಳು, ವೈದ್ಯರ ಸಮಸ್ಯೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.