ಶನಿವಾರಸಂತೆ, ಜು. ೮: ನಾಡಪ್ರಭು ಕೆಂಪೇಗೌಡರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅಸಾಮಾನ್ಯವಾಗಿದ್ದು, ಯಾವ ಸಾಮ್ರಾಟರಿಗೂ ಕಮ್ಮಿಯಿಲ್ಲ. ಅವರ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಕೆಂಪೇಗೌಡ ಯುವ ವೇದಿಕೆ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಸಾವಿರಾರು ಕೆರೆಗಳನ್ನು ಕಟ್ಟಿಸಿ ಜಗದ್ವಿಖ್ಯಾತ ದಾಖಲೆಗಳ ವೀರ. ಬೆಂಗಳೂರು ನಿರ್ಮಾತೃ ನಾಡ ದೊರೆಯ ಸ್ಮರಣೆಯನ್ನು ಪ್ರತಿವರ್ಷ ಕೆಂಪೇಗೌಡ ಜಯಂತ್ಯೋತ್ಸವದ ಮೂಲಕ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಶುಂಠಿ ಭರತ್ ಕುಮಾರ್, ನಿವೃತ್ತ ವಕೀಲ ಶಿವರಾಂ, ಮುಖಂಡ ಡಿ. ಭಗವಾನ್ ಗೌಡ ಮಾತನಾಡಿದರು.

ಪ್ರಮುಖರಾದ ರಾಜಮ್ಮ, ಕೆ.ಕೆ. ಪುಟ್ಟರಾಜ್, ಕೆ.ಟಿ. ಅಪ್ಪಾಜಿ, ರಾಮಕೃಷ್ಣ, ಸಿ.ಟಿ. ಕೃಷ್ಣೇಗೌಡ, ಡಿ.ಆರ್. ಪುರುಷೋತ್ತಮ್, ಶಿಕ್ಷಕ ಎನ್.ಎಂ. ಚಂದ್ರಶೇಖರ್, ಸುಮಲತಾ, ಯುವ ವೇದಿಕೆ ಪದಾಧಿಕಾರಿಗಳಾದ ರಘು ದೇವರಾಜ್, ನಂದೀಶ್, ಅಮಿತ್, ಹರ್ಷವರ್ಧನ್, ಕೀರ್ತಿ, ಸತೀಶ್, ಹರೀಶ್ ಭಂಡಾರ, ಮನು, ಚಂದನ್, ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು, ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.