ಕಳೆದ ಐದು ವರ್ಷಗಳಲ್ಲಿ ಕೊಡಗಿನೊಂದರಲ್ಲೇ ಸುಮಾರು 200ಕ್ಕೂ ಹೆಚ್ಚು ಭೂಕುಸಿತಗಳಾಗಿವೆ. ಕೆಲವೊಂದು ಸೂಕ್ಷ್ಮ ಪ್ರದೇಶವನ್ನು ಭೂಕಂಪ ಪೀಡಿತ ಪ್ರದೇಶಗಳೆಂದು ದಾಖಲಿಸಲಾಗಿದೆ. ಅರಣ್ಯ ನಾಶ ಮತ್ತು ಕಾಂಕ್ರಿಟ್ಕರಣದ ಮೂಲಕ ಮಾನವನ ದುರಾಸೆಯ ಪರಿಣಾಮದ ಜತೆಯಲ್ಲಿ ಮಳೆ-ಮೋಡಗಳ ಕೋಪ ಮತ್ತು ಭೂಕಂಪನವು ಕೊಡಗಿನ ವಿನಾಶದಲ್ಲಿ ಪಾತ್ರ ವಹಿಸಬಹುದು.
ಸುಮಾರು ಐದು ವರ್ಷಗಳ ಬಳಿಕ ಜುಲೈ 9 ರಂದು ಕೊಡಗಿನ ಕೆಲವು ಭಾಗಗಳಲ್ಲಿ ಲಘು ಕಂಪನ ಸಂಭವಿಸಿದ್ದು, ಮಡಿಕೇರಿಯ ಸುತ್ತಮುತ್ತ 10 ಕಿ.ಮೀ. ಅಳದಲ್ಲಿ ಭೂಕಂಪನದ ತೀವ್ರತೆ 3.4 ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ. ಇದನ್ನು ಕೆಲವು ಸ್ಥಳೀಯ ಅರೆಬುದ್ದಿ ಜೀವಿಗಳು ಹಗುರವಾಗಿ ಪರಿಗಣಿಸಿ, ಹಾಗೇನು ಇಲ್ಲ ಜನರು ಭಯಪಡುವ ಅವಶ್ಕತೆ ಇಲ್ಲ, ಎಂದು ಹೇಳಿ ಕೇವಲ 19 ದಿನಗಳಲ್ಲಿ, 28ನೇ ಮಂಗಳವಾರ ಬೆಳಿಗ್ಗೆ ಮತ್ತೆ ಭೂಮಿ ಕಂಪಿಸಿದ ನಂತರ ಮಡಿಕೇರಿಯಲ್ಲಿ ಭೀತಿ ಆವರಿಸಿದೆ! ಮಂಗಳವಾರ ಬೆಳಿಗ್ಗೆ 7.45ರ ಸುಮಾರಿಗೆ ಮಡಿಕೇರಿ, ನಾಪೋಕ್ಲು, ಬಲ್ಲಮಾವಟಿ, ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ ಮೊದಲಾದ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
ಹಿಂದಿನ ಕಂಪನಗಳಿಗಿಂತ ಭಿನ್ನವಾಗಿ ಮಂಗಳವಾರದ ಕಂಪನವು ದೊಡ್ಡ ಶಬ್ಧದೊಂದಿಗೆ ಸೇರಿಕೊಂಡಿದೆ. ಕರಿಕೆಯಲ್ಲಿ ಆದ ದೊಡ್ಡ ಶಬ್ಧದ ನಂತರ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಗೃಹೋಪಯೋಗಿ ವಸ್ತುಗಳು ಮೇಲಿಂದ ಕೆಳಗೆ ಬಿದ್ದವು ಎಂದು ಅಲ್ಲಿಯ ನಿವಾಸಿಗಳು ತಮ್ಮ ಅನುಭವವನ್ನು ಹೇಳಿಕೊಂಡು ಅಂತಕದ ಬದುಕು ನಮ್ಮದು ಎಂದು ಉದ್ಗರಿಸುತ್ತಿದ್ದಾರೆ! ಕಂಪನದ ಜೊತೆಗಿನ ಧ್ವನಿಯು 2018ರಲ್ಲಿ ವರದಿಯಾದ ಅಂತಹ ಘಟನೆಯ ಮರುಪಂದÀ್ಯದಂತಿದೆ! ಅಂದು ಕೂಡ ಇದೇ ರೀತಿ ಕಂಪನಗಳಾಗಿ ಕೇವಲ 5-6 ದಿನದಲ್ಲಿ ದೊಡ್ಡ ಶಬ್ದದೊಂದಿಗೆ ಇಡೀ ಭೂ ಪ್ರದೇಶವು ಕುಸಿದು ಜಾರಿ ಕರಗಿದ ದಾರುಣ ಚಿತ್ರಣ ನಮ್ಮ ಕಣ್ಣು ಮುಂದೆ ಹಾಗೆಯೆ ಇರುವಾಗ ಈಗ ಮತ್ತೆ ಈ ಕಂಪನಗಳು ಅಲ್ಲಿಯ ಜನರ ಹೃದಯವನ್ನು ಕಂಪಿಸುತ್ತಿದೆ! ಒಟ್ಟು 6 ಬಾರಿ ಭೂಕಂಪನಗಳು ವರದಿಯಾಗಿವೆ.
ಕಳೆದ ಹಲವಾರು ವರ್ಷಗಳ ಮಳೆಮಾಪನ ಇಲಾಖೆಯು ಸ್ವತಂತ್ರವಾಗಿ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ 1961 ರಲ್ಲಿ ಇದೇ ರೀತಿ ಕಂಪನಗಳು ಕಂಡುಬಂದಿದ್ದು ಆದರೆ, ಅದು ಕೇವಲ ಒಂದು ವಾರದ ಮಳೆಯ ತೀವ್ರತೆಯಿಂದ ಭಾಗಮಂಡಲದ ಕೆಲವು ಕಡೆ ಭೂಕಸಿತಗಳಾಗಿದ್ದವು. ಅದಾದ ನಂತರ 2018ರ ಭೂಕುಸಿತ ಇಡೀ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿತ್ತು.
ಅಂದು ಕೊಡಗಿನಲ್ಲಿ ಸಂಭವಿಸಿದ ತೀವ್ರ ಭೂಕುಸಿತಕ್ಕೆ ಆ ಪ್ರದೇಶದಲ್ಲಿ ಅನುಭವಿಸಿದ ಭಾರೀ ಮಳೆಯೇ ಕಾರಣ ಎಂದು ಒಂದು ಗುಂಪು ಪ್ರತಿಪಾದಿಸಿದ್ದನ್ನು ನಾವು ನೋಡಿದ್ದೇವೆ. ಕೊಡಗಿನಲ್ಲಿ ಕಳೆದ ಬಾರಿಯಷ್ಟು ಇನ್ನೂ ಭಾರೀ ಮಳೆಯಾಗಿಲ್ಲ. ಆದರೂ ಇಂತಹ ಕಂಪನಗಳಾಗಲೂ ಏನು ಕಾರಣ? ಇದಕ್ಕೆ ಆ ಒಂದು ಗುಂಪಿನವರ ಉತ್ತರವೇನು? ಜನರನ್ನು ರಕ್ಷಿಸಬೇಕಾದವರೆ ಹೀಗಾದರೆ ಹೇಗೆ? ಭೂಕಂಪ ಶಾಸ್ತ್ರಜ್ಞ ವಿಜಯ್, ನೇತೃತ್ವದ ತಂಡ ಹೆಬ್ಬಟ್ಟಗೇರಿಯ ಜವಹರ್ ನವೋದಯ ವಿದ್ಯಾಲಯದಲ್ಲಿ ಭೂಕಂಪನ ಗ್ರಾಫ್ ಅಳವಡಿಸಿ ನಿಜವಾಗಿಯು ಭೂಕಂಪನದ ಚಟುವಟಿಕೆ ನಡೆದಿದೆಯೇ ಎಂದು ಪರಿಶೀಲಿಸಿದಾಗ ಕೊಡಗಿನ ವಾಯುವ್ಯಕ್ಕೆ 25 ಕಿ.ಮಿ. ದೂರದಲ್ಲಿ ಜುಲೈ 9 ರಂದು ದಾಖಲಾದ 3.4 ತೀವ್ರತೆಯ ಭೂಕಂಪನ ಎಂದು ಖಚಿತಪಡಿಸಿದ್ದಾರೆ.
ಕೊಡಗಿನಲ್ಲಿ ಈ ಮೊದಲು ನಡೆದಂತಹ ಭೂ ಕುಸಿತಕ್ಕೆ ಹೋಲಿಕೆಯಾಗುವಂತಿದೆ. ಆದಾಗ ಇಂದು ಕೊಡಗಿನಲ್ಲಿ ಭೂ- ಬಳಕೆಯಲ್ಲಿ ಯಾವುದೇ ಬದಲಾವಣೆಯನ್ನಾಗಲ್ಲಿ, ರಸ್ತೆಗಳ ಹಾಗೂ ಕಳಪೆ ಲೇಔಟ್ಗಳ ವಿನ್ಯಾಸಗಳು ನಿಂತಿಲ್ಲ! ಹೊಳೆ- ನದಿಗಳ ದಂಡೆ ಪ್ರದೇಶಗಳನ್ನು ಬಫರ್ ಜೋನ್ ಎಂದು ಕೇವಲ ಸರ್ಕಾರದ ಕಡತಗಳಲ್ಲಿ ಮಾತ್ರ! ಎಲ್ಲೆಂದರಲ್ಲಿ ಅತಿಕ್ರಮಣಕ್ಕೆ ರಾಜಕೀಯ ಧುರೀಣರ ಆಮಂತ್ರಣ! ನೈರ್ಸಗಿಕ ಕಾಡುಗಳಿಂದ ಆವೃತವಾಗಿದ್ದ ತಲಕಾವೇರಿ ಪ್ರದೇಶ ಇಂದು ಮಾನವನ ಹುಚ್ಚಾಟಕ್ಕೆ ನಾಶವಾಗಿ ಬೋಳಾಗುತ್ತಿದೆ. ಬೆಟ್ಟಗಳ ಮೇಲೆ ರೆಸಾರ್ಟ್ಗಳು, ಈಜುಕೊಳಗಳು, ಬೆಟ್ಟದ ತುತ್ತತುದಿಗೆ ತಲುಪಲು ಸಾವಿರಾರು ವರ್ಷಗಳಿಂದ ಬಿಗಿಯಾಗಿದ್ದ ಮಣ್ಣನ್ನು ಯಂತ್ರಗಳಿಂದ ಕೊರೆದು ರಸ್ತೆ ನಿರ್ಮಾಣ! 2015ರಿಂದ ಇಲ್ಲಿಯವರೆಗೆ ಈ ಶ್ರೇಣಿಯಲ್ಲಿ 650 ಚ.ಕಿ.ಮೀ. ಅರಣ್ಯ ಕಡಿಮೆಯಾಗಿದೆ. ಅನೇಕ ಸಂಶೋಧಕರು ಇದನ್ನು ಪರಿಶೀಲಿಸಿ ಇಲ್ಲಿ ಸ್ಥಳೀಯ ಮರಗಳ ನಾಶದಿಂದ ಅನಾಹುತಗಳು ಹೆಚ್ಚು ಸಂಭವಿಸಿದೆ ಎಂಬ ವರದಿಗಳು ಸರ್ಕಾರದ ಕಪಾಟಿನಲ್ಲಿ ಬೆಚ್ಚಗೆ ಉಳಿದುಕೊಂಡಿದೆ.
ವಿಪರ್ಯಾಸವೆಂದರೆ ನಮ್ಮನ್ನಾಳುವವರೆ ರಕ್ಷಿತಾರಣ್ಯ ಪ್ರದೇಶಗಳನ್ನು ಕಬಳಿಸಿ ಮನೆ-ಮಠ ಮಾಡಿಕೊಂಡಿರುವುದು! ‘ಅಭಿವೃದ್ಧಿ’ ಎಂಬ ಹೆಸರಲ್ಲಿ ಅನಗತ್ಯ ಯೋಜನೆಗಳು ನಮ್ಮನ್ನು ಹಾಳುಮಾಡುತ್ತಿವೆ. ‘ಪ್ರವಾಸೋದ್ಯಮ’ದ ಕೊಡಗಿನ ಬೆನ್ನು ಹತ್ತಿ ಕುಳಿತ್ತಿದೆ, ಅದಕ್ಕೆ ಪೂರಕವಾಗಿ ದುಡಿಯುತ್ತಿರುವ ‘ವಿಕ್ರಮಾಧಿತ್ಯ’ರಂತಹ ಜನನಾಯಕರು!. ಕೊಡಗು ಸಮುದ್ರವಿಲ್ಲದ ‘ಗೋವಾ’! ಕಾಫಿ-ಏಲಕ್ಕಿ ನಾಡು, ಕೊಡವರ ಬೀಡು ಇಂದು ಕಂಡವರ ಬಿಡಾರವಾಗುತ್ತಿದೆ. ಪ್ರವಾಸಿಗರ ಪ್ರಸಾದದ ರುಚಿ ಹತ್ತಿಸಿಕೊಂಡ ನಮ್ಮವರು ಕ್ರಿಮಿನಲ್ ಹಿನ್ನೆಲೆಯುಳ್ಳವರೂ ಬಂದರೂ ಏನೂ ಅರಿಯದೆ ಅತಿಥಿ ಸತ್ಕಾರ ಮಾಡುತ್ತಾರೆ! ನಿಜವಾದ ಅಭಿವೃದ್ಧಿ ಪೂರಕವಾದ ಆಸ್ಪತ್ರೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಕಾಫಿಗೆ ಪೂರಕವಾದ ಉದ್ದಿಮೆಗಳು, ಪ್ರತೀ ಹಳ್ಳಿಗಳಲ್ಲಿ ಸಣ್ಣ ಸಣ್ಣ ಏತ ನೀರಾವರಿಗಳು, ಉತ್ತಮ ರೀತಿಯ ವಿದ್ಯುತ್ ಸೌಲಭ್ಯ, ಪ್ರತೀ ಗ್ರಾಮಗಳ ರಸ್ತೆಗಳ ಬಗ್ಗೆ ಚಿಂತನೆ ಇವೆಲ್ಲವನ್ನು ಬಿಟ್ಟು ಪ್ರತಿ ವರ್ಷ ಇರುವ ರಸ್ತೆಗೆ ಬೇಸಿಗೆಯಲ್ಲಿ ಡಾಂಬರೀಕರಣ ಮಳೆಗಾಲದ ನಂತರ ಮತ್ತೆ ಗುಂಡಿಗಳ ಪ್ರದರ್ಶನ!
ನಮ್ಮ ಜಿಲ್ಲೆಯಲ್ಲಿ 2005 ರಿಂದ 2020ರ ವರೆಗೆ ಸುಮಾರು 150 ಹೆಕ್ಟೇರ್ ಕೃಷಿ ಪ್ರದೇಶ ವಸತಿ ಬಡಾವಣೆಗಳಾಗಿ ಮಾರ್ಪಟ್ಟಿವೆ. ಇವುಗಳಲ್ಲಿ ಶೇ. 80 ರಷ್ಟು ಕಳಪೆ ವಿನ್ಯಾಸಗಳು! ಬೆಟ್ಟದ ಬುಡದಲ್ಲಿರುವ ಕೆಲವೊಂದು ರೆಸಾರ್ಟ್ಗಳು ಅಲ್ಲಿ ನೈಸರ್ಗಿಕವಾಗಿ ಹರಿಯುವ ನೀರಿಗೆ ಕಾಂಕ್ರೀಟ್ ಕಟ್ಟೆಗಳನ್ನು ನಿರ್ಮಿಸಿ ಆ ಪ್ರದೇಶದ ನೆಲ ಹೆಚ್ಚು ನೀರು ಕುಡಿದು ಒಂದಲ್ಲ ಒಂದು ದಿನ ಭೂ ಕುಸಿತಕ್ಕೆ ಕಾರಣವಾಗುತ್ತದೆ! ಇಂದಿನ ಕಂಪನಗಳು ಮುಂದಿನ ಭೂಕುಸಿತಕ್ಕೆ ನಂಟು ಇರುವುದರಿಂದ ಈ ಒಂದು ಪ್ರದೇಶದ ಜನರ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತವು ಹೆಚ್ಚು ಗಮನ ಹರಿಸುವುದು ಒಳಿತು. ಹೀಗೆಯೇ ಕಂಪನಗಳು ಮುಂದುವರೆದರೆ ಬೆಟ್ಟಗಳೆಲ್ಲ ಜಾರಿ ಕೊಡಗು ಬಯಲು ಪ್ರದೇಶವಾಗಲಿದೆ. ಉತ್ತರಕ್ಕೆ ಭೂಕಂಪನಗಳು, ದಕ್ಷಿಣದಲ್ಲಿ ಹುಲಿಗಳ ಅಟ್ಟಹಾಸ, ಪೂರ್ವಕ್ಕೆ ಆನೆಗಳ ಕಾಟ, ಇನ್ನು ನಮಗುಳಿದಿರುವುದು ಪಶ್ಚಿಮ ಘಟ್ಟದ ನಿಷೇಧಿತ ಪ್ರದೇಶಗಳು ಮಾತ್ರ.
-ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ