ಸೋಮವಾರಪೇಟೆ, ಜು. 7: ಗೌಡಳ್ಳಿ ಆರೋಗ್ಯ ಪ್ರಾಥಮಿಕ ಕೇಂದ್ರ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಇಂದೂಧರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ರಕ್ತದಾನದಿಂದ ಇನ್ನೊಂದು ಜೀವವನ್ನು ಉಳಿಸಬಹುದು. ಅಪಘಾತದಿಂದ ಗಾಯಗೊಂಡವರಿಗೆ, ಹೆಚ್ಚಿನ ಗರ್ಭಿಣಿಯರಿಗೆ ಹಾಗೂ ಡೆಂಗೂನಿಂದ ಬಳಲುವ ಮಕ್ಕಳಿಗೆ ಸರಿಯಾದ ಸಮಯಕ್ಕೆ ರಕ್ತದ ಅವಶ್ಯಕತೆ ಇರುತ್ತದೆ ಎಂದರು.
ಅದರಲ್ಲೂ ರೈತರು, ಬಡವರು ಕೆಲವೊಮ್ಮೆ ರಕ್ತಕ್ಕಾಗಿ ಪರದಾಡುವಂತ ಪರಿಸ್ಥಿತಿ ಇರುತ್ತದೆ. ರಕ್ತದ ಅವಶ್ಯಕತೆ ಹೆಚ್ಚಿರುವುದರಿಂದ ಆರೋಗ್ಯವಂತ ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ನಿಗದಿತ ಸಮಯದಲ್ಲಿ ರಕ್ತದಾನ ಮಾಡುವುದರಿಂದ ರಕ್ತದಾನಿಯ ಆರೋಗ್ಯ ಉತ್ತಮವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ರಕ್ತದಾನಿಗಳು ಹೆಚ್ಚಿರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ 35 ಮಂದಿ ರಕ್ತದಾನ ಮಾಡಿದರು. 65 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು ಸುದೀಪ್, ಉಪಾಧ್ಯಕ್ಷೆ ರಶೀದಾ ಷರೀಪ್, ಸದಸ್ಯರಾದ ಪ್ರಮೀಳಾ, ಗೋಪಾಲಕೃಷ್ಣ, ಶಂಕರ್, ಮಡಿಕೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದ ಡಾ. ಅನುಷಾ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಪಿ. ಮಹೇಶ್, ಆರೋಗ್ಯ ಸಂರಕ್ಷಣಾಧಿಕಾರಿ ಪಾರ್ವತಿ, ಸಮುದಾಯ ಆರೋಗ್ಯಾಧಿಕಾರಿಗಳಾದ ಧರಣೇಶ್, ನವ್ಯಶ್ರೀ ಇದ್ದರು.