ಮಡಿಕೇರಿ, ಜು. 7: ಸುಮಾರು 7 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಆರೋಪಿಸಿದ್ದು, ಈ ತಡೆಗೋಡೆ ಕುಸಿಯುತ್ತಿರುವ ಸಂಬಂಧ ಇದನ್ನು ಗುತ್ತಿಗೆ ಪಡೆದಿರುವ ತಮಿಳುನಾಡಿನ ಅಯ್ಯಪ್ಪನ್ ಕನ್ಸ್ಟ್ರಕ್ಷನ್ ಕಂಪೆನಿಗೆ ಗುತ್ತಿಗೆ ನೀಡಲು ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಅಂದಿನ ಕಾರ್ಯಪಾಲಕ ಅಭಿಯಂತರ ಮದನ್ ಗೋಪಾಲ್, ಅಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಂ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತ ಕಿರಿಯ ಅಭಿಯಂತರ ಕೆ.ಎಲ್. ದೇವರಾಜ್ ಇವರುಗಳ ವಿರುದ್ಧ ಎಸಿಬಿ ತನಿಖೆ ಆಗಬೇಕೆಂದು ಆಗ್ರಹಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ತೆನ್ನೀರಾ ಮೈನಾ ಮಾತನಾಡಿದರು. ತಜ್ಞರ ಸಲಹೆ ಪಡೆಯದೆ, ತಾಂತ್ರಿಕ ಅಡಚಣೆಗಳ ಬಗ್ಗೆ ಚಿಂತನೆ ನಡೆಸದೆ ಜಿಲ್ಲಾಧಿಕಾರಿ ಕಚೇರಿಗೆ ತಡೆಗೋಡೆ ನಿರ್ಮಿಸ ಲಾಗಿದ್ದು, ಅದು ಕುಸಿತಗೊಂಡು ಪ್ರಾಣಹಾನಿ ಸಂಭವಿಸಿದರೆ ಸರಕಾರ ಹಾಗೂ ಜನಪ್ರತಿನಿಧಿಗಳೇ ಹೊಣೆ ಹೊರಬೇಕಾಗುತ್ತದೆ ಎಂದರು.
ಲೋಕೋಪಯೋಗಿ ಇಲಾಖೆ ಯಲ್ಲಿ ಹಿರಿಯ ಅನುಭವಿ ಇಂಜಿನಿಯರ್ಗಳು
(ಮೊದಲ ಪುಟದಿಂದ) ಇದ್ದರೂ ಕೂಡ ಕಾಮಗಾರಿ ನಿರ್ವಹಣೆಯನ್ನು ಭ್ರಷ್ಟಾಚಾರದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿರುವ ಕಿರಿಯ ಇಂಜಿನಿಯರ್ ಅವರಿಗೆ ವಹಿಸಿದ್ದುದು, ಈ ಕಾಮಗಾರಿ ಕಳಪೆಯಾಗಲು ಕಾರಣವಾಗಿದೆ ಎಂದು ಮೈನಾ ಆಪಾದಿಸಿದರು.
ಭಾಗಮಂಡಲ-ಕರಿಕೆ ರಸ್ತೆಯ ತಿರುವು ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಹಣ ದುರುಪಯೋಗದ ಆರೋಪದಡಿ ಶಿಕ್ಷೆಗೆ ಒಳಗಾದ ಲೋಕೋಪಯೋಗಿ ಇಲಾಖೆಯ ಮೂವರು ಇಂಜಿನಿಯರ್ಗಳಲ್ಲಿ ಕೆ.ಎಲ್. ದೇವರಾಜ್ ಅವರು ಕೂಡ ಒಬವ್ಬರಾಗಿದ್ದಾರೆ. ಹಣ ದುರುಪಯೋಗ ಸಂಬಂಧ ಉಪಲೋಕಾಯುಕ್ತರು ಸಲ್ಲಿಸಿದ್ದ ವಿಚಾರಣಾ ವರದಿಯಲ್ಲಿ ಕೆ.ಎಲ್. ದೇವರಾಜು ಅವರಿಗೆ ದಂಡನೆ ವಿಧಿಸಿ ಲೋಕೋಪಯೋಗಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ. ಆದರೆ ಕೆ.ಎಲ್. ದೇವರಾಜ್ ಅವರು ಈಗಲೂ ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದು, ಹಿರಿಯ ಇಂಜಿನಿಯರ್ಗಳನ್ನು ಕಡೆಗಣಿಸಿ, ಸಣ್ಣಪುಟ್ಟ ಕಾಮಗಾರಿಗಳಿಗೆ ಹಿರಿಯ ಇಂಜಿನಿಯರ್ಗಳನ್ನು ಸೀಮಿತಗೊಳಿಸಿ ದೊಡ್ಡ ಮೊತ್ತದ ಕಾಮಗಾರಿಗಳ ನಿರ್ವಹಣೆಯನ್ನು ಜನಪ್ರತಿನಿಧಿಗಳು ಹಾಗೂ ಮೇಲಧಿಕಾರಿಗಳು ದೇವರಾಜ್ ಅವರ ಸುಪರ್ದಿಗೆ ಒಪ್ಪಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಮೈನಾ ಹೇಳಿದರು.
27.1.2020 ರಂದು ದಂಡನೆಗೆ ಒಳಗಾದ ಅಧಿಕಾರಿಯ ಮೇಲೆ ದಂಡನೆ ಪ್ರಕ್ರಿಯೆ ಕೈಗೊಳ್ಳಬೇಕಾದ ಮೇಲಧಿಕಾರಿಗಳು 2022ರ ಮಾರ್ಚ್ವರೆಗೂ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದೇಕೆ ಎಂದು ಅವರು ದೂರಿದರು. ಈ ಅಧಿಕಾರಿಯ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರಿಗೆ ತಿಳಿದಿರಲಿಲ್ಲವೆ ಎಂದು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ಎಸಿಬಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಮುಖಂಡ ಡಾ. ಮಂಥರ್ ಗೌಡ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಖರ್ಚು ಮಾಡಲಾದ ಹಣಕ್ಕಿಂತ ಹೆಚ್ಚಿನ ಹಣವನ್ನು ಅಲ್ಲಿನ ತಡೆಗೋಡೆ ನಿರ್ಮಾಣಕ್ಕೆ ವ್ಯಯಿಸಲಾಗಿದೆ. ಆದರೆ ಜಿಲ್ಲೆಯನ್ನು ರಕ್ಷಿಸಬೇಕಾದ ಜಿಲ್ಲಾಧಿಕಾರಿಯವರ ಕಚೇರಿಗೆ ಇಂದು ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ಸಂಬಂಧ ಪಕ್ಷದ ನಾಯಕರಿಂದ ಸದನದಲ್ಲೂ ಕೂಡ ಪ್ರಸ್ತಾಪಿಸುವ ಕಾರ್ಯ ಮಾಡಲಾಗುವುದು. ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ರಕ್ಷಣೆ ಬಗ್ಗೆ ಮಾತ್ರ ಚಿಂತಿಸದೆ ಕೊಡಗಿನ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಕಾಂಗ್ರೆಸ್ ಸೈನಿಕ ಘಟಕದ ಅಧ್ಯಕ್ಷ ಬೊಳ್ಯಂಡ ಗಣೇಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಸಂಘಟನಾ ಕಾರ್ಯದರ್ಶಿ ರವೂಫ್ ಶೇಕ್ ಉಪಸ್ಥಿತರಿದ್ದರು.