ಮಡಿಕೇರಿ, ಜು. 7: ಜಿಲ್ಲೆಗೆ ಕೆ.ಎಸ್.ಡಿ.ಎಂ.ಎ, ಜಿ.ಎಸ್.ಐ, ಎನ್.ಐ.ಟಿ.ಕೆ, ಕೆ.ಎಸ್.ಎನ್.ಡಿ.ಎಂ.ಸಿ, ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಭಾಗದ ವಿಜ್ಞಾನಿಗಳ ತಂಡ ಆಗಮಿಸಿ ಅಧ್ಯಯನ ಆರಂಭಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಮಾಹಿತಿ ನೀಡಿದರು.
ಚೆಂಬು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್, ಸೂರತ್ಕಲ್, ಬೆಂಗಳೂರಿನಿಂದ 6 ಜನರ ವಿಜ್ಞಾನಿಗಳ ತಂಡ ಬಂದಿದೆ. ಭೂಕಂಪನದ ಕಾರಣದ ಬಗ್ಗೆ 2 ದಿನ ಜಿಲ್ಲೆಯಲ್ಲಿದ್ದು, ಅಧ್ಯಯನ ನಡೆಸಲಿದ್ದಾರೆ. ಪ್ರಾಥಮಿಕವಾಗಿ ಇದೊಂದು ನೈಸರ್ಗಿಕ ಚಟುವಟಿಕೆಯಾಗಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. (ಮೊದಲ ಪುಟದಿಂದ) ರಾಜ್ಯದ ವಿವಿಧೆಡೆ ಭೂಕಂಪನ ಸಂಭವಿಸಿದ್ದು, ಇದಕ್ಕೆ ಭೂಮಿ ಸಮತೋಲನ ಕೊಂಚ ಕಳೆದುಕೊಂಡಿರುವುದು ಕಾರಣವಾಗಿದೆ. ಭೂಕಂಪನದಿಂದ ಭೂಮಿಯೊಳಗೆ ಸೃಷ್ಟಿಯಾಗಿದ್ದ ಒತ್ತಡ ಬಿಡುಗಡೆಯಾಗಿರುವುದರಿಂದ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸುವುದಿಲ್ಲ ಎಂದರು.
ವಿಪತ್ತು ಸಂಭವಿಸಿದ್ದಲ್ಲಿ ಜನರನ್ನು ಸ್ಥಳಾಂತರಿಸಲು ಕಂದಾಯ ಸಚಿವರು ಸೂಚಿಸಿದ್ದಾರೆ. ಆದರೆ, ಆ ರೀತಿಯ ಸನ್ನಿವೇಶ ಇನ್ನೂ ಸೃಷ್ಟಿಯಾಗಿಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದನ್ನು ಎದುರಿಸಲು ಸಿದ್ಧವಾಗಿದೆ ಎಂದ ಅವರು, ಸದ್ಯಕ್ಕೆ ಗಣಿಗಾರಿಕೆ ಭೂಕಂಪನ ಕಾರಣವಲ್ಲ. ವೈಜ್ಞಾನಿಕ ಅಧ್ಯಯನ ನಡೆಸಿದ ಬಳಿಕ ಸರಕಾರಕ್ಕೆ ವರದಿ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭ ವಿಜ್ಞಾನಿಗಳ ತಂಡ ಜನರಿಗೆ ಭೂಕಂಪನ ಸಂಭವಿಸಿದ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.