ಮಡಿಕೇರಿ, ಜು. 7: ಇದೀಗ ಜುಲೈ 6ರಿಂದ ಪುನರ್ವಸು ಮಳೆ ಆರಂಭಗೊಂಡಿದ್ದು, ಇದೂ ಕೂಡ ತನ್ನ ಅಬ್ಬರ ತೋರುತ್ತಿದೆ. ನಿನ್ನೆ ಬೆಳಿಗ್ಗೆ ತುಸು ಇಳಿಮುಖಗೊಂಡಂತಿದ್ದ ಮಳೆ ಸಂಜೆಯಾಗುತ್ತಿದ್ದಂತೆ ಮತ್ತೆ ಬಿರುಸು ಪಡೆದಿದೆ. ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಮುಂದುವರಿದಿದೆ. ಸತತವಾಗಿ ಕೆಲವು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಿರುವುದರಿಂದ ಭತ್ತದ ಗದ್ದೆಗಳೂ ಸೇರಿದಂತೆ ನದಿಪಾತ್ರಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಕೆಲವು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗುವ ಆತಂಕ ಮೂಡಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 2.28 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 2.5, ವೀರಾಜಪೇಟೆ 1.69 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 2.06 ಇಂಚಿನಷ್ಟು ಸರಾಸರಿ ಮಳೆಯಾಗಿದೆ.
ಹೋಬಳಿವಾರು
ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 4.76 ಇಂಚು, ಸಂಪಾಜೆ 3.76, ಮಡಿಕೇರಿ ಕಸಾಬ 1.58, ನಾಪೋಕ್ಲು 2.23, ವೀರಾಜಪೇಟೆ ಕಸಬಾ 1.54, ಹುದಿಕೇರಿ 2.95, ಶ್ರೀಮಂಗಲ 1.77, ಪೊನ್ನಂಪೇಟೆ 2, ಅಮ್ಮತ್ತಿ 1.12 ಹಾಗೂ ಬಾಳೆಲೆಯಲ್ಲಿ 0.80 ಇಂಚು ಮಳೆಯಾಗಿದೆ.
ಸೋಮವಾರಪೇಟೆ ಕಸಬಾ 1.25, ಶನಿವಾರಸಂತೆ 2, ಶಾಂತಳ್ಳಿ 4.71, ಕೊಡ್ಲಿಪೇಟೆ 1.64, ಕುಶಾಲನಗರ 1.03 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 1.76 ಇಂಚು ಮಳೆಯಾಗಿದೆ.
ಹಾರಂಗಿ ಜಲಾಶಯಕ್ಕೆ 13,974 ಕ್ಯೂಸೆಕ್ಸ್ ಒಳಹರಿವು ಇದ್ದು, ನದಿಗೆ 15,580 ಕ್ಯೂಸೆಕ್ಸ್ ಹಾಗೂ ನಾಲೆಗೆ 20 ಕ್ಯೂಸೆಕ್ಸ್ ನೀರು ಹರಿಯಬಿಡಲಾಗುತ್ತಿದೆ.
ಶೀತದಿಂದ ಜಾನುವಾರು ಸಾವು
ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆ ಮುಂದುವರೆದಿದ್ದು, ವಾತಾವರಣ ಅತ್ಯಂತ ಶೀತದಿಂದ ಕೂಡಿದೆ. (ಮೊದಲ ಪುಟದಿಂದ) ಅತಿ ಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಅತಿಯಾದ ಶೀತಕ್ಕೆ ಮೇಯಲು ಬಿಟ್ಟಿದ್ದ ಜಾನುವಾರು ಸಾವನ್ನಪ್ಪಿದೆ. ಶಾಂತಳ್ಳಿ ಗ್ರಾಮದ ಹೆಚ್.ಡಿ. ಸುರೇಶ ಎಂಬವರಿಗೆ ಸೇರಿದ 4 ವರ್ಷದ ಜಾನುವಾರು ಮೇಯಲು ಬಿಟ್ಟಿದ್ದ ಸಂದರ್ಭ ಸಾವನ್ನಪ್ಪಿದ್ದು, ಸ್ಥಳಕ್ಕೆ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಬದಾಮಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 117.8 ಮಿ.ಮೀ., ಕೊಡ್ಲಿಪೇಟೆಗೆ 41, ಶನಿವಾರಸಂತೆಗೆ 50, ಸೋಮವಾರಪೇಟೆಗೆ 31.4 ಮಿ.ಮೀಟರ್ ಮಳೆಯಾದ ಬಗ್ಗೆ ವರದಿಯಾಗಿದೆ. ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ತೀವ್ರಗೊಂಡ ಪುನರ್ವಸು
ಚೆಯ್ಯಂಡಾಣೆ: ಈ ವ್ಯಾಪ್ತಿಯಲ್ಲಿ ಪುನರ್ವಸು ಮಳೆಯ ಆರ್ಭಟಕ್ಕೆ ನದಿಗಳು ತುಂಬಿ ಹರಿಯುತ್ತಿದ್ದು.
ಚೇಲಾವರದ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಸುಮಾರು 150 ಅಡಿ ಎತ್ತರದಿಂದ ಚೋಮಕುಂದ್,ಕಬ್ಬೆ ಬೆಟ್ಟ ಹಾಗೂ ದೊಡ್ಡಬೆಟ್ಟದ ಮೂಲಕ ಹರಿದು ಬರುವ ನೀರು ಚೇಲಾವರ ಫಾಲ್ಸ್ ಮೂಲಕ ಧುಮ್ಮಿಕ್ಕಿ ಹರಿಯುತ್ತಾ ಪ್ರೇಕ್ಷಕರನ್ನು ಮೌನವಾಗಿ ತನ್ನತ್ತ ಸೆಳೆಯುತ್ತಿದೆ. ಈ ಜಲಾಪಾತಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗಿದ್ದು ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ನೋಡುಗರ ಗಮನ ಸೆಳೆಯುವ ಜಲಪಾತ ಇದಾಗಿದ್ದು ಈ ಜಲಪಾತಕ್ಕೆ ಅಪಾಯದ ಅರಿವಿಲ್ಲದೆ ಮೋಜು ಮಸ್ತಿಗಾಗಿ ನೀರಿಗೆ ಇಳಿಯದೆ ಕೇವಲ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರೊಂದಿಗೆ ಇಲ್ಲಿನ ಗ್ರಾಮಸ್ಥರು ಕೋರಿ ಕೊಳ್ಳುತ್ತಾರೆ. ಈಗಾಗಲೇ ಈ ಜಲಪಾತದಲ್ಲಿ ಹಲವು ವರ್ಷಗಳಿಂದ ಸಾವು ನೋವುಗಳಾಗಿರುವುದನ್ನು ಸ್ಮರಿಸಬಹುದು.
ಸುಂಟಿಕೊಪ್ಪ, ಜು. 7: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ವಾರದಿಂದ ಮಳೆ ಅಧಿಕಗೊಂಡ ಪರಿಣಾಮ ಗಾಳಿ, ಮಳೆಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಬಿದ್ದು ಭಾರೀ ನಷ್ಟ ಸಂಭವಿಸಿದೆ.
ಸುಂಟಿಕೊಪ್ಪ ಹೋಬಳಿಯ ಬೆಟ್ಟಗೇರಿ, ನಾಕೂರು - ಶಿರಂಗಾಲ, ಪನ್ಯ, ಭೂತನಕಾಡು, ಮಳೂರು, ಹೇರೂರುವಿನಲ್ಲಿ ಮಳೆಯ ರಭಸಕ್ಕೆ ಮರಗಳು, ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ಭಾರೀ ನಷ್ಟ ಸಂಭವಿಸಿದೆ. ಮಳೆಯ ರಭಸಕ್ಕೆ 36ಕ್ಕೂ ಹೆಚ್ಚು ಕಂಬಗಳು ಧರೆಗುರುಳಿ ತುಂಡಾಗಿದ್ದು, ಅದರಲ್ಲಿ 4000 ಮೀಟರ್ ತಂತಿಗಳು ಹಾನಿಯಾಗಿ ಸೆಸ್ಕ್ ನಿಗಮಕ್ಕೆ ನಷ್ಟ ಸಂಭವಿಸಿದೆ ಎಂದು ಇಲಾಖೆ ಕಿರಿಯ ಅಭಿಯಂತರ ಜೈದೀಪ್ ತಿಳಿಸಿದ್ದಾರೆ.
ಪನ್ಯ ಸುಬ್ರಮಣ್ಯ ತೋಟದ ಬಳಿ ಮರ ಬಿದ್ದು ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾನಿಯಾಗಿದ್ದು, ಸಿಬ್ಬಂದಿಗಳು ಸರಿಪಡಿಸಿದ್ದಾರೆ. ಶಾಂತಗೇರಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಹಾನಿಯಾಗಿದ್ದು, ಅದನ್ನು ಬದಲಿಸಬೇಕಾಗಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಹಗಲು ರಾತ್ರಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಇದೀಗ 20 ಮಂದಿ ಸಿಬ್ಬಂದಿಗಳು ಲಾರಿ, ಪಿಕ್ಅಪ್ ಹಾಗೂ ಗುತ್ತಿಗೆದಾರರ ಡಿಗ್ಗರ್ ಬಳಸಿ ಗಾಳಿ, ಮಳೆಯಿದ್ದರೂ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಜೈದೀಪ್ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ ತೋಟದಿಂದ ಬೀಟಿ ಮರವೊಂದು ಬಿದ್ದ ಪರಿಣಾಮ ಮನೆ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡು ಮನೆಯಲ್ಲಿದ್ದ ಮಹಿಳೆ ಖತೀಜ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿ ಸುಂಟಿಕೊಪ್ಪ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆದಕಲ್ ಗ್ರಾಮ ಪಂಚಾಯಿತಿ ಏಳನೇ ಮೈಲು ನಿವಾಸಿ ಜಾನಕಿ ಎಂಬವರ ಮನೆಯ ಅಡಿಪಾಯ ಕುಸಿದಿದೆ. ಅದೇ ಗ್ರಾಮದ ದೇಜಪ್ಪ ಎಂಬವರ ಮನೆಯ ಮುಂಭಾಗದ ಗೋಡೆ ಗಾಳಿ - ಮಳೆಗೆ ಕುಸಿತಗೊಂಡು ವಾಸ ಮಾಡಲು ಸಾಧ್ಯವಿಲ್ಲದಾಗಿದೆ.ಚೆಟ್ಟಳ್ಳಿ, ಜು. 7: ಚೆಟ್ಟಳ್ಳಿ-ಮಡಿಕೇರಿ ಮಾರ್ಗದ ಕತ್ತಲೆಕಾಡು ಸಮೀಪ ಮರ ಕಲ್ಲುಬಂಡೆಗಳಿಂದ ಕೂಡಿದ ಬರೆಕುಸಿದ ಪರಿಣಾಮ ರಸ್ತೆ ಸಂಚಾರಕ್ಕೆ ಆಡಚಣೆ ಉಂಟಾಗಿದೆ. ನಂತರ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯ ನಡೆಯಿತು.
ತೆರವುಗೊಳಿಸಿದ ಬರೆಯ ಮಣ್ಣನ್ನು ಲಾರಿಯ ಮೂಲಕ ಮತ್ತೊಂದು ಬದಿಯ ಬರೆಗಳಿಗೆ ತುಂಬಲಾಗುತ್ತಿದ್ದು, ಮಳೆ ಜೋರಾದರೆ ಬರೆ ಜರಿದು ಅಪಾಯಕಾರಿಯಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಸರಿನ ರಸ್ತೆ.. ಅಲ್ಲಲ್ಲಿ ಜರಿಯುತ್ತಿರುವ ಬರೆ.. ಭಯದಲ್ಲೇ ಸಂಚರಿಸುವ ವಾಹನ... ಅಪಾಯಕಾರಿಯಾಗಿರುವ ನೂತನ ತಡೆಗೋಡೆ... ಇವೆಲ್ಲ ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ದೃಶ್ಯ..
ಪ್ರತೀ ಮಳೆಗಾಲದಲ್ಲೂ ಬರೆ ಜರಿಯುತ್ತಿದೆ. ಕಳೆದ ಬಾರಿ ಖಾಸಗಿ ಮೊಬೈಲ್ ನೆಟ್ವರ್ಕ್ ಕಂಪೆನಿಯೊಂದು ಚರಂಡಿ ತೆಗೆದು ಕೇಬಲ್ ಅಳವಡಿಸಿದ ಪರಿಣಾಮ ಮಳೆಗಾಲದಲ್ಲಿ ಬರೆಕುಸಿದು ರಸ್ತೆ ಅಪಾಯಮಟ್ಟ ತಲುಪಿತ್ತು. ಇದರ ಪರಿಣಾಮ ಬರೆಯ ಮಣ್ಣೆಲ್ಲ ಪಕ್ಕದ ತೋಟಕ್ಕೆ ಜಾರಿ ಭಾರೀ ನಷ್ಟ ಸಂಭವಿಸಿತ್ತು. ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ ತಡೆಗೋಡೆ ನಿರ್ಮಿಸಿದ ಪರಿಣಾಮ ನಿರ್ಮಾಣದ ಹÀಂತದಲ್ಲಿ ಕೆಲವು ತಡೆಗೋಡೆ ಕುಸಿದರೆ ಮತ್ತೆ ಕೆಲವು ಅಪಾಯಕಾರಿಯಾಗಿದೆ ಎಂದು ಸ್ಥಳೀಯರ ಆರೋಪ. ತಡೆಗೋಡೆಗೆ ಹಾಕಲಾದ ಮಣ್ಣಿನ ಮೇಲೆ ರಸ್ತೆ ಉದ್ದಕ್ಕೂ ಹರಿಯುವ ಮಳೆ ನೀರು ತುಂಬಿಕೊಳ್ಳ ತೊಡಗಿದೆ.
ಬೀಳುವ ಹಂತದಲ್ಲಿ ಮರಗಳು..
ತಡೆಗೋಡೆ ನಿರ್ಮಿಸಿ ಅದಕ್ಕೆ ಮಣ್ಣು ತುಂಬಲು ರಸ್ತೆಬದಿಯ ಬರೆಯನ್ನು ಕೊರೆದು ಲೋಡುಗಟ್ಟಲೆ ಮಣ್ಣನ್ನು ತಡೆಗೋಡೆಗೆ ತುಂಬಲಾಗಿದೆ. ಕೊರೆದ ಬರೆಗಳೆಲ್ಲ ಇಂದು ಅಪಾಯಕಾರಿಯಾಗಿದ್ದು ಮಳೆ-ಗಾಳಿಗೆ ಬಾಗುತ್ತಾ ಬೀಳುವ ಹಂತ ತಲುಪಿದೆ. ಮತ್ತೆ ಕೆಲವೆಡೆ ಒಂದೆರಡು ಬರೆಗಳು ಈಗಾಗಲೇ ಜರಿದರೆ ಮತ್ತೆ ಕೆಲವೆಡೆ ನೀರಿನ ಚರಂಡಿಗಳಲ್ಲಿ ನೀರು ಸಂಗ್ರಹವಾದ ಪರಿಣಾಮ ರಸ್ತೆಯಲ್ಲಿ ಹರಿಯುತ್ತಿದೆ.
ಹರಸಾಹಸದಿಂದ ವಾಹನ ಸಂಚಾರ..
ಇಲ್ಲಿನ ಡಾಮರೀಕರಣಗೊಂಡ ರಸ್ತೆಗಳು ಕಿತ್ತುಹೋಗಿದ್ದು, ಕೆಸರುಮಯವಾದ ರಸ್ತೆ ಒಂದೆಡೆಯಾದರೆ ರಸ್ತೆಯ ಮಧ್ಯೆಯೇ ತಗ್ಗುದಿಣ್ಣೆ ವಾಹನಗಳ ಸಂಚಾರಕ್ಕೆ ಪರದಾಡುತ್ತಿದ್ದು, ಎರಡು ವಾಹನಗಳು ಸಂಚರಿಸುವಾಗ ಹರಸಾಹಸದ ದೃಶ್ಯ ಕಂಡುಬರುತ್ತಿದೆ.
ಕೆಲದಿನಗಳ ಹಿಂದೆಯೇ ಅಲ್ಲಲ್ಲಿ ಸಣ್ಣಪುಟ್ಟ ಬರೆಗಳು ಜರಿದಿದ್ದು ಕೆಲವೆಡೆ ಚಂರಂಡಿಗಳು ಮುಚ್ಚಿಹೋಗಿವೆ ಮತ್ತೆ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿವೆ. ಅವನೆಲ್ಲ ತತ್ಕ್ಷಣವೇ ಸರಿಪಡಿಸಿಕೊಂಡರೆ ಮುಂಬರುವ ಭಾರೀ ಅನಾಹುತವನ್ನು ತಡೆಯಬಹುದಾಗಿದೆ. ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಆದೇಶಿಸಬೇಕಿದೆ.
ವಾಹನ ಸವಾರರೇ ಎಚ್ಚರ
ಚೆಟ್ಟಳ್ಳಿ-ಮಡಿಕೇರಿಗೆ ತೆರಳುವ ರಸ್ತೆ ಕಿರಿದಾಗಿದ್ದು ಅಪಾಯಕಾರಿಯಾಗಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಯಾವ ಸಂದರ್ಭದಲ್ಲಾದರೂ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಬಹುದು. ವಾಹನ ಸವಾರರು ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಮತ್ತೊಂದು ವಾಹನಕ್ಕೆ ದಾರಿಬಿಡುವ ಸಂದರ್ಭ ಎಚ್ಚರವಿರಲಿ. -ಪುತ್ತರಿರ ಕರುಣ್ ಕಾಳಯ್ಯ
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಅಪರಾಹ್ನ ಮಳೆ ಬಿರುಸುಗೊಂಡು ಧಾರಾಕಾರ ಸುರಿಯಿತು. ಮಳೆಯಿಂದಾಗಿ ಹಳ್ಳ ಕೊಳ್ಳ, ನದಿತೊರೆಗಳು ತುಂಬಿ ಹರಿಯುತ್ತಿವೆ. ಸಮೀಪದ ಬೊಳಿಬಾಣೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಸಂಚಾರ ದುಸ್ತರಗೊಂಡಿದೆ.
ಮಡಿಕೇರಿ-ಭಾಗಮಂಡಲ ಮುಖ್ಯರಸ್ತೆಯ ಬೆಟ್ಟಗೇರಿ ಸಮೀಪದ ತಳೂರು ಮನೆಯ ಬಳಿ ಭಾರೀ ಗಾತ್ರದ ಹಲಸಿನ ಮರ ರಸ್ತೆಗಡ್ಡಲಾಗಿ ಮುರಿದು ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಸಂಜೆ ಐದು ಗಂಟೆಯ ವೇಳೆಗೆ ಮರಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ನಾಪೋಕ್ಲು, ಭಾಗಮಂಡಲ ಮತ್ತಿತರ ಸ್ಥಳಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಗ್ರಾಮಸ್ಥರು, ಸಾರ್ವಜನಿಕರು ಒಟ್ಟುಗೂಡಿ ಮರ ತೆರವುಗೊಳಿಸಿದರು.
ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ನಾಪೋಕ್ಲು-ಮೂರ್ನಾಡು, ನಾಪೋಕ್ಲು-ಬಲಮುರಿ, ಚೆರಿಯಪರಂಬು-ಕಲ್ಲುಮೊಟ್ಟೆ ಸಂಪರ್ಕ ರಸ್ತೆಗಳು ಕಡಿತಗೊಳ್ಳುವ ಹಂತ ತಲುಪಿದೆ. ಬಿರುಸುಗೊಂಡ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.ಕುಶಾಲನಗರ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಒಟ್ಟು 535 ಮಿ.ಮೀ. ಪ್ರಮಾಣದ ಮಳೆಯಾಗಿದ್ದು, ನಾಟಿ ಕಾರ್ಯ ಚುರುಕುಗೊಂಡಿದೆ. ಈ ತಿಂಗಳ 6 ದಿನಗಳ ಅವಧಿಯಲ್ಲಿ ಒಟ್ಟು 100 ಮಿ.ಮೀ. ಪ್ರಮಾಣದ ಮಳೆ ಸುರಿದ ದಾಖಲೆ ಕಂಡು ಬಂದಿದೆ. ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಜೋಳ ನಾಟಿ ಈಗಾಗಲೇ ಮುಗಿದಿದೆ. 2100 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ನಾಟಿ ನಡೆದಿದೆ ಎಂದು ಕೃಷಿ ಅಧಿಕಾರಿ ಅರುಣ ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ ಅವರು, ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 2600 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ ಹೊಂದಲಾಗಿದೆ. ರೋಗ ಕೀಟ ಹತೋಟಿಗೆ ಕೂಡ ಕೀಟನಾಶಕಗಳನ್ನು ನೀಡಿ ಆ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗುತ್ತಿದ್ದು, ಹುಳ ನಾಶ ಮಾಡುವ ಔಷಧಿ ಸಿಂಪಡನೆ ಅಗತ್ಯ ಎಂದ ಅವರು, ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಕುಶಾಲನಗರ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸುವಂತೆ ಕೋರಿದ್ದಾರೆ. ಬೆಳೆ ವಿಮೆ ಬಗ್ಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೋರಿರುವ ಕೃಷಿ ಇಲಾಖೆ ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.ಸಿದ್ದಾಪುರ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಆತಂಕ ಸೃಷ್ಟಿಸಿದೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಾದ ಕೊಂಡಂಗೇರಿ ಹಾಗೂ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮಕ್ಕೆ ನೋಡೆಲ್ ಅಧಿಕಾರಿ ಪ್ರಮೋದ್ ಅವರ ನೇತೃತ್ವದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಾಕರ್, ಮುತ್ತಪ್ಪ, ಗ್ರಾಮ ಸಹಾಯಕ ಕೃಷ್ಣನ್ ಕುಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ಪ್ರಮೋದ್ ಅವರು ಹಾಲುಗುಂದ ಹಾಗೂ ಕಣ್ಣಂಗಾಲ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಹಪೀಡಿತ ಪ್ರದೇಶದ ನಿವಾಸಿಗಳ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ ಒಂದು ವೇಳೆ ಪ್ರವಾಹ ಏರಿಕೆಯಾದಲ್ಲಿ ಅಗತ್ಯ ಕ್ರಮಗಳನ್ನು ಹಾಗೂ ಅವರಿಗೆ ಬೇಕಾದ ಪರಿಹಾರ ಕೇಂದ್ರಗಳನ್ನು ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಮ್ಮತ್ತಿ ಹೋಬಳಿಯ ಕಾವಾಡಿ ಗ್ರಾಮದಲ್ಲಿ ಮಾದಪ್ಪ ಎಂಬವರ ಗದ್ದೆಯಲ್ಲಿ ಬೆಳೆಸಲಾದ ತಾಳೆಬೆಳೆ ಕೃಷಿ ಮಾಡಿದ ಗದ್ದೆಯು ಜಲಾವೃತಗೊಂಡಿದ್ದು, ನೋಡೆಲ್ ಅಧಿಕಾರಿ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕರಡಿಗೋಡು ಪ್ರವಾಹಪೀಡಿತ ನದಿ ತೀರದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹದ ನೀರು ಏರಿಕೆಯಾದಲ್ಲಿ ನದಿ ತೀರದ ನಿವಾಸಿಗಳಿಗೆ ಗುರುತಿಸಲಾದ ಪರಿಹಾರ ಕೇಂದ್ರಕ್ಕೆ ನಿವಾಸಿಗಳನ್ನು ಸ್ಥಳಾಂತರ ಮಾಡಲು ಹಾಗೂ ಅವರಿಗೆ ಆಶ್ರಯ ಪಡೆಯಲು ಬೇಕಾದ ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಲ್ಲಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪೆÇನ್ನಂಪೇಟೆ: ಪೆÇನ್ನಂಪೇಟೆ ತಾಲೂಕಿನಲ್ಲಿ ಬೆಳಿಗ್ಗೆ ಸ್ವಲ್ಪ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ನಂತರ ಬಿರುಸುಗೊಂಡಿದೆ. ಕೊಡಗಿನ ದಕ್ಷಿಣ ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ಲಕ್ಷ್ಮಣತೀರ್ಥ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಬಾಳೆಲೆ ಸಮೀಪ ನಿಟ್ಟೂರು ಹಳೆ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಮಳೆಗೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶನಿವಾರಸಂತೆ: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಾಧಾರಣ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಡುವು ನೀಡುತ್ತಾ ಸುರಿದ ಮಳೆ ಮಧ್ಯಾಹ್ನದ ನಂತರ ಜಿಟಿಜಿಟಿ ಸುರಿಯುತ್ತಿತ್ತು. ಅರ್ಧ ಇಂಚು ಮಳೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಗಾಳಿ ಮಾತ್ರ ರಭಸವಾಗಿ ಬೀಸುತ್ತಿದ್ದು, ಶೀತ ಅಧಿಕವಾಗಿತ್ತು.
ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಮಾಲಂಬಿ, ಹಿತ್ತಲಕೇರಿ, ಹಾರೆಹೊಸೂರು ಗ್ರಾಮಗಳಲ್ಲಿ ಸಾಕಷ್ಟು ಮಳೆಯಾಗಿದ್ದು, ಹೊಳೆಕೆರೆಗಳು ತುಂಬಿವೆ. ಮುಳ್ಳೂರು ಗ್ರಾಮದ ಐತಿಹಾಸಿಕ ಇಂಟಿನಾಯಕನ ಕೆರೆ ತುಂಬಿ ಹರಿಯುತ್ತಿದೆ.
ಈ ಕೆರೆಯ ನೀರು ನಿಡ್ತ ಪಂಚಾಯಿತಿ ವ್ಯಾಪ್ತಿಯ 5 ಕೆರೆಗಳಿಗೆ ಹರಿಯುತ್ತದೆ. ವ್ಯವಸಾಯಕ್ಕೆ ನೀರೊದಗಿಸುತ್ತದೆ. ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಬಹುತೇಕ ಗದ್ದೆಗಳನ್ನು ಉತ್ತು, ಭತ್ತದ ಬೀಜ ಭಿತ್ತನೆಗೆ ಸಿದ್ಧಗೊಳಿಸಿದ್ದರೆ, ಕೆಲವು ಗದ್ದೆಗಳಲ್ಲಿ ಸಸಿಮಡಿ ಬೆಳೆದು ನಿಂತಿದ್ದು, ನಾಟಿಯ ನಿರೀಕ್ಷೆಯಲ್ಲಿವೆ.
ವೀರಾಜಪೇಟೆ: ಕಳೆದ ಒಂದು ವಾರದಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತÀg ಪ್ರದೇಶದಲ್ಲಿ ಉತ್ತಮವಾಗಿ ಮಳೆ ಸುರಿದಿದೆ.
ಬಿಡುವು ನೀಡದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗದ್ದೆ, ಹಳ್ಳಕೊಳ್ಳ ಹಾಗೂ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಏರಿಕೆಯುಂಟಾಗಿದೆ. ಜಿಲ್ಲೆಯ ವಿವಿಧೆಡೆ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ಸಮೀಪದ ಕದನೂರು ಹೊಳೆ ಹಾಗೂ ಸಮೀಪದ ಬೇತ್ರಿಯ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲಿ ಏರಿಕೆಯುಂಟಾಗಿದೆ.
ಮುಂಗಾರು ಮಳೆ ತೀವ್ರವಾಗಿ ಸುರಿಯುತ್ತಿರುವ ಪರಿಣಾಮ ಬೆಟ್ಟ ಪ್ರದೇಶಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿಯುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಹಾಗಾಗಿ ಪುರಸಭೆ ವ್ಯಾಪ್ತಿಯ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ, ನೆಹರು ನಗರಗಳಲ್ಲಿ ವಾಸವಾಗಿರುವ ಕುಟುಂಬಗಳು ಭಯ ಆವರಿಸಿದ್ದಲ್ಲಿ ಜಿಲ್ಲಾಡಳಿತದ ವತಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ತಂಗುವಂತೆ ಅಥವಾ ಸುರಕ್ಷಿತ ಸ್ಥಳಕ್ಕೆ ತೆರಳಿ ವಾಸ್ತವ್ಯ ಹೂಡುವಂತೆ ಪುರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ.