ಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮಸ್ಯೆ ಉಂಟಾಗಿದ್ದು, ಅತಿವೃಷ್ಟಿ ಎದುರಿಸಲು ರಾಜ್ಯ ಸರಕಾರ ಸರ್ವ ರೀತಿಯಲ್ಲಿ ಸಿದ್ಧವಾಗಿದೆ, ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅಭಯ ನೀಡಿದರು.
ಸರಣಿ ಭೂಕಂಪನ ಸಂಭವಿಸಿರುವ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕೆಲವು ಭಾಗಗಳಲ್ಲಿ ಕಡಿಮೆ ತೀವ್ರತೆಯಲ್ಲಿ ಸರಣಿ ಭೂಕಂಪನ ಸಂಭವಿಸಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಚೆಂಬು ಗ್ರಾಮದಲ್ಲಿ ತೆರೆಯಲಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಭೂಕಂಪನ ತೀವ್ರತೆ ಕಡಿಮೆ ಇರುವ ಹಿನ್ನೆಲೆ ಯಾರು ಆತಂಕಪಡುವ ಅಗತ್ಯವಿಲ್ಲ. ಭಾರಿ ಮಳೆ, ಭೂಕುಸಿತ ಹಾಗೂ ಬರೆ ಕುಸಿತ ಜಿಲ್ಲೆಯಲ್ಲಿ ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಆಪತ್ತು ಇಲ್ಲ ಎಂದು ತಜ್ಞರು ವರದಿ ನೀಡಿದ್ದು, ಮಳೆ ಮುಂದುವರೆದರೆ ಸಮಸ್ಯೆ ತಲೆದೋರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
3 ದಿನಗಳ ಬಳಿಕ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಮಳೆ ಮತ್ತಷ್ಟು ತೀವ್ರಗೊಂಡರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಜೊತೆ ಕೂಡ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಮಳೆಯಿಂದ ಮನೆಹಾನಿಗೆ ಪರಿಹಾರ ಮೊತ್ತವನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿದ್ದೇವೆ. ರಾಜ್ಯಾದ್ಯಂತ ಪರಿಹಾರ ಮೊತ್ತ ಒಂದೆ ರೀತಿಯಲ್ಲಿ ಇರಲಿದೆ. ಪೂರ್ಣ ಮನೆಹಾನಿಗೆ ರೂ. 5 ಲಕ್ಷ, ಭಾಗಶಃ ಮನೆ ಹಾನಿಗೆ ರೂ. 3 ಲಕ್ಷ, ಸಣ್ಣಪುಟ್ಟ ಹಾನಿಗೆ ರೂ. 50 ಸಾವಿರ, ನೀರು ನುಗ್ಗಿ ಹಾನಿಯಾದ ಮನೆಗಳಿಗೆ ರೂ. 10 ಸಾವಿರ ಪರಿಹಾರ ನೀಡಲು ಈಗಾಗಲೇ ಆದೇಶಿಸಲಾಗಿದ್ದು, ಸಂತ್ರಸ್ತರಿಗೆ ಪರಿಹಾರದ ಹಣ ತ್ವರಿತವಾಗಿ ದೊರೆಯಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಳೆಗಾಲ ಎದುರಿಸಲು ರಾಜ್ಯ ಸರಕಾರ ಎಲ್ಲಾ ರೀತಿಯಲ್ಲಿಯೂ ಸಿದ್ಧವಾಗಿದೆ. ಕರ್ನಾಟಕವಲ್ಲದೆ ನೆರೆ ರಾಜ್ಯಗಳ ಜಲಾಶಯಗಳ ಮೇಲೂ ನಿಗಾವಹಿಸಲಾಗಿದೆ. ನೀರಿನ ಬಿಡುಗಡೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ರಸ್ತೆಯಲ್ಲಿ ಬರೆ ಜರಿದು ಮಣ್ಣು ಸಂಗ್ರಹಗೊಂಡ ಪ್ರದೇಶದಲ್ಲಿ ತೆರವು ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ.
(ಮೊದಲ ಪುಟದಿಂದ) ಮಾನವ ಹಾಗೂ ಜಾನುವಾರುಗಳ ಜೀವ ರಕ್ಷಣೆಗೆ ಸರಕಾರ ಕಟಿಬದ್ಧವಾಗಿದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಲ್ಲುಗಣಿಗಾರಿಕೆ ಹಾಗೂ ಭೂಕಂಪನಕ್ಕೆ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಪುನರ್ ಪರಿಶೀಲನೆಗೆ ಸೂಚಿಸಿದ್ದೇನೆ. ಈ ಸಂದರ್ಭ ಸಂಬಂಧ ಇದೆ ಎಂದು ಆದಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, 15 ದಿನಗಳಿಂದ ಭಾರಿ ಮಳೆಯೊಂದಿಗೆ, ಸರಣಿ ಭೂಕಂಪನ ಆತಂಕ ಸೃಷ್ಟಿಸಿದೆ. ಕೆಲವು ಕಡೆ ಬರೆ ಕುಸಿದಿದೆ. ನಡುರಾತ್ರಿಯಲ್ಲಿ ಭೂಕಂಪನವಾಗಿ ಜನರು ಮನೆಯಿಂದ ಹೊರಬಂದ ಘಟನೆ ನಡೆದಿದೆ. ಕೃಷಿ ಫಸಲು ನಾಶವಾಗಿದೆ. ಆರ್ಥಿಕ ಸಂಕಷ್ಟದಿಂದ ಜನ ನಲುಗುತ್ತಿದ್ದಾರೆ. ಸರಕಾರ ಜನರ ಸಮಸ್ಯೆ ಸ್ಪಂದಿಸಬೇಕು ಎಂದು ಈ ಸಂದರ್ಭ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಕನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ತಹಶೀಲ್ದಾರ್ ಮಹೇಶ್, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಕುಸುಮ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಮೇಶ್ ಹೊಳ್ಳ, ಸೇರಿದಂತೆ ಇನ್ನಿತರರು ಹಾಜರಿದ್ದರು.
ಮನೆ ಹಾನಿ - ಪರಿಹಾರ ವಿತರಣೆ
ಇತ್ತೀಚಿಗೆ ಭಾರಿ ಮಳೆಯಿಂದ ಹಾನಿಯಾದ ಚೆಂಬು ಗ್ರಾಮದ ನೆಲ್ಲಿಪುಣಿ ಅಕ್ಕಮ್ಮ ಎಂಬವರ ಮನೆಗೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ರೂ. 3 ಲಕ್ಷ ಪರಿಹಾರ ಮೊತ್ತದ ಮೊದಲ ಹಂತದ ರೂ. 24 ಸಾವಿರವನ್ನು ವಿತರಿಸಿದರು.
ಕುಟುಂಬಸ್ಥರೊಂದಿಗೆ ಮಾತನಾಡಿ, ಅವರ ಸಮಸ್ಯೆ ಆಲಿಸಿದ ಸಚಿವರು, ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಬರೆ ಇಲ್ಲದ ಜಾಗದಲ್ಲಿ ಮನೆಯನ್ನು ಮರುನಿರ್ಮಿಸಿಕೊಳ್ಳುವಂತೆ ಹೇಳಿದರು.
ಕರ್ತೋಜಿಗೆ ಭೇಟಿ
ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕರ್ತೋಜಿಯಲ್ಲಿ ಬರೆ ಕುಸಿದ ಜಾಗಕ್ಕೆ ಸಚಿವರು ಭೇಟಿ ನೀಡಿದರು.
ಸಂಚಾರ ವ್ಯವಸ್ಥೆಗೆ ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ. ಜಲಮೂಲಗಳಿಗೆ ಧಕ್ಕೆ ತರಬೇಡಿ ಎಂದು ಈ ಸಂದರ್ಭ ಅಧಿಕಾರಿಗಳು ಸೂಚನೆ ನೀಡಿದರು. ಅಗತ್ಯತೆ ಎದುರಾದಲ್ಲಿ ಸ್ಥಳಾಂತರ
ಭೂಕುಸಿತ ಹಾಗೂ ಭೂಕಂಪನದಿಂದ ಬಿರುಕು ಬಿಟ್ಟಿರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಅಗತ್ಯವಿದ್ದಲ್ಲಿ ಸ್ಥಳಾಂತರ ಮಾಡಲು ಜಿಲ್ಲಾಡಳಿತಕ್ಕೆ ಕಂದಾಯ ಸಚಿವ ಆರ್. ಅಶೋಕ್ ಸೂಚಿಸಿದರು.
ಸರಣಿ ಭೂಕಂಪನದ ಹಿನ್ನೆಲೆ ತಾನು ಜಿಲ್ಲೆಗೆ ಆಗಮಿಸಿದ್ದೇನೆ. ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿದೆ. ಪ್ರಸ್ತುತ ಭೂಕಂಪನದಿಂದ ಯಾವುದೇ ಅನಾಹುತ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಕೆಲವು ಕಡೆ ಭೂಕಂಪನದಿಂದ ಬಿರುಕು ಬಿಟ್ಟ ಜಾಗದಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆ. ಆ ಪ್ರದೇಶದಲ್ಲಿರುವವರನ್ನು ಅಗತ್ಯತೆ ಎದುರಾದಲ್ಲಿ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸ್ಥಳಾಂತರದ ಅನಿವಾರ್ಯತೆ ಎದುರಾದಲ್ಲಿ ಸಂತ್ರಸ್ತರ ಮನೆಗಳನ್ನು ಕಾಯಲು ಕೂಡ ಕ್ರಮವಹಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಸದ್ಯಕ್ಕೆ 40 ಮನೆಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ. ಅವರಿಗೆ ತ್ವರಿತವಾಗಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.