ವೀರಾಜಪೇಟೆ, ಜು. ೬: ವೀರಾಜಪೇಟೆ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಇಂದು ಅಧಿಕೃತವಾಗಿ ಎಸಿ ಕೋರ್ಟ್ ಕಾರ್ಯಾರಂಭ ಮಾಡಿತು. ಕಂದಾಯ ಮಂತ್ರಿಗಳ ಜಿಲ್ಲಾ ಪ್ರವಾಸ ಕಾರಣ ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ದೀಪ ಬೆಳಗುವ ಮೂಲಕ ಅತಿಥಿ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್, ಹಲವು ವರ್ಷಗಳ ವಕೀಲರ ಸಂಘದ ಪರಿಶ್ರಮದಿಂದ, ಶಾಸಕರ ಮುತುವರ್ಜಿಯಿಂದ ವೀರಾಜಪೇಟೆಯಲ್ಲಿ ಎ.ಸಿ ಕೋರ್ಟ್ ಕಾರ್ಯಾರಂಭ ಮಾಡಿದೆ. ಇದರಿಂದ ಕಕ್ಷಿದಾರರು ಹಾಗೂ ವಕೀಲರಿಗೆ ಅನುಕೂಲವಾಗಲಿದೆ ಎಂದರು. ಸರ್ಕಾರಿ ವಕೀಲೆ ಸಿ.ಬಿ ಅನಿತಾ ಮಾತನಾಡುತ್ತಾ, ಕುಟ್ಟ ಹಾಗೂ ಪೊನ್ನಂಪೇಟೆ ತಾಲೂಕಿನವರಿಗೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಮಾತನಾಡಿ, ವೀರಾಜಪೇಟೆ ತಹಶೀಲ್ದಾರ್ ಕೋರ್ಟ್ನಲ್ಲಿ ೩೯೮ ಪ್ರಕರಣಗಳು ಇದ್ದವು. ಪ್ರಸ್ತುತ ಎಂಟು ಪ್ರಕರಣಗಳು ಮಾತ್ರ ಇತ್ಯರ್ಥ ಆಗಲು ಬಾಕಿಯಿದೆ. ತಾಲೂಕು ದಂಡಾಧಿಕಾರಿ ನ್ಯಾಯಾಲಯ ಇದೇ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ಕಾರ್ಯಾರಂಭ ಮಾಡಿದೆ ಎಂದರು.

ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ಎಂ.ಕೆ. ದಿನೇಶ್, ಖಜಾಂಚಿ ವಿ.ಜಿ. ರಾಕೇಶ್, ಜಂಟಿ ಕಾರ್ಯದರ್ಶಿ ವಿ. ಎಸ್ ಪ್ರೀತಂ, ವಕೀಲರ ಸಂಘದ ಪದಾಧಿಕಾರಿಗಳು, ಕಕ್ಷಿದಾರರು ಹಾಜರಿದ್ದರು. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳ ಕಂದಾಯ ಪ್ರಕರಣಗಳು ಇನ್ನೂ ಮುಂದೆ ಪ್ರತಿ ಬುಧವಾರ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿವೆ.