ಶ್ರೀಮಂಗಲ, ಜು. ೫: ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ತಾರಕಕೇರಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನಿರ್ಧಿಷ್ಟ ಸಮಯದೊಳಗೆ ಕಂಡುಕೊಳ್ಳುವ ಅಗತ್ಯತೆ ಇದೆ. ಜಿಲ್ಲೆಯಲ್ಲಿ ಎಕರೆಗÀಟ್ಟಲೆ ಭೂಪರಿವರ್ತನೆಯಾಗುತ್ತಿದ್ದು, ಇದರಿಂದ ಕೊಡಗಿನ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಭೌಗೋಳಿಕ ವಾಗಿ ದೊಡ್ಡ ಗಂಡಾAತರೊAದಿಗೆ ಕೇರಳೀಕರಣದ ಮೂಲಕ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಗೊಂಡಿದ್ದು, ಈ ಬಗ್ಗೆ ಜನಾಂದೋಲನ ನಡೆಸಿ ಕೊಡಗನ್ನು ರಕ್ಷಿಸಲು ನಿರ್ಣಯ ಕೈಗೊಳ್ಳಲಾಯಿತು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡಗು ಸಂರಕ್ಷಣಾ ವೇದಿಕೆ ಮತ್ತು ಕೊಡಗು ಬೆಳೆಗಾರರ ಒಕ್ಕೂಟದ ಸಹಯೋಗದಲ್ಲಿ ಜಿಲ್ಲೆಯ ಹಲವು ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ದೀರ್ಘ ಚರ್ಚೆ ನಡೆದು ಮುಂದಿನ ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಸಂರಕ್ಷಣಾ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ, ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಶಕದಿಂದ ಕಾಡುಪ್ರಾಣಿ ಮಾನವ ಸಂಘರ್ಷ ತಾರಕಕೇರಿದ್ದರೂ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವೈಫಲ್ಯ ಕಂಡಿದ್ದಾರೆ. ಕಾಡು ಪ್ರಾಣಿಗಳಿಂದ ಪ್ರಾಣಹಾನಿ ಅನುಭವಿ ಸುತ್ತಿದ್ದು, ಬೆಳೆಗಾರರು ವ್ಯಾಪಕವಾಗಿ ಬೆಳೆ ನಷ್ಟ ಅನುಭವಿ ಸುತ್ತಿದ್ದು, ಗದ್ದೆ, ತೋಟಗಳನ್ನು ಪಾಳು ಬಿಡುವ ಸ್ಥಿತಿಗೆ ತಲುಪಿದ್ದಾರೆ. ಜಿಲ್ಲೆ ತೊರೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಪಂಚವಾರ್ಷಿಕ ಯೋಜನೆ ಮೂಲಕ ಜಿಲ್ಲೆಯ ಅರಣ್ಯ ಸರಹದ್ದಿನಲ್ಲಿ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಸುಳದಂತೆ ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಇದಲ್ಲದೆ ಕೇರಳ ರಾಜ್ಯದ ಒತ್ತಿನಲ್ಲಿರುವ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕ್ಕೆ ಮತ್ತು ಏಕರೆಗಟ್ಟಲೆ ನಿವೇಶನಗಳಿಗಾಗಿ ಭೂ ಪರಿವರ್ತನೆ ಆಗುತ್ತಿದ್ದು, ಇಲ್ಲಿ ಹೊರ ರಾಜ್ಯದ ಜನರು ಜಾಗ ಖರೀದಿಸಿ ವಾಸಿಸುತ್ತಿ ದ್ದಾರೆ. ಜಿಲ್ಲೆಯು ಕೇರಳೀಕರಣದತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಕೊಡಗು ಕರ್ನಾಟಕದಿಂದ ಕೈತಪುö್ಪವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ತಮಗೆ ವೈಯಕ್ತಿಕ ಲಾಭ ತಂದು ಕೊಡುವ ವಿಚಾರಗಳಿಗೆ ಮಾತ್ರ ಹೆಚ್ಚಿನ ಶ್ರದ್ದೆ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿ, ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿಯಲ್ಲಿ ಭ್ರಷ್ಟಚಾರ ಸೇರಿದಂತೆ ಜಿಲ್ಲೆಯ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದನ್ನು ಪರಿಹರಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮಗೆ ವೈಯಕ್ತಿಕ ಲಾಭಗಳಿಸುವ ಕಾರ್ಯಕ್ರಮ ವಿಚಾರಗಳಿಗೆ ಮಾತ್ರ ಗಮನ ಹರಿಸುತ್ತಿದ್ದಾರೆ ಎಂದು ಟೀಕಿಸಿದರು.
ಪರಿಸರ ಮತ್ತು ಆರೋಗ್ಯ ಫೌಂಡೇಶನ್ ಸಂಸ್ಥೆಯ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿ, ಈಗಾಗಲೇ ಕೊಡಗು ಜಿಲ್ಲೆಗೆ ಮಾರಕವಾಗಿರುವ ಬಹುಪಥÀ ಹೆದ್ದಾರಿ ಮತ್ತು ರೈಲ್ವೆ ಮಾರ್ಗದ ಯೋಜನೆಗೆ ನ್ಯಾಯಾಲಯದಿಂದ ತಡೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಮಾನವ- ಕಾಡಾನೆ ಸಂಘರ್ಷ ತಡೆಗೆ ದಕ್ಷಿಣ ಕೊಡಗಿನ ಹೂವಿನ ಕಾಡು, ಫೈತ್ ಹಾಗೂ ಕೊಡಗು ಗಡಿ ಕೇರಳ ಭಾಗದ ನರಿಕಲ್ ಕಾಫಿ ತೋಟದಿಂದ ಅರಣ್ಯ ಒತ್ತುವರಿಯಾಗಿದ್ದು, ಕಾಡಾನೆ ಕಾರಿಡಾರ್ಗೆ ತಡೆ ಉಂಟಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸಲು ಈಗಾಗಲೇ ಮೈಸೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಒತ್ತಾಯಿಸಿದ ಪರಿಣಾಮ, ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಲ್ಲದೆ ಸುಮಾರು ೪೦೦೦ ಎಕರೆ ರಬ್ಬರ್ ತೋಟ ಗುತ್ತಿಗೆಗೆ ಕೊಟ್ಟಿದ್ದನ್ನು
(ಮೊದಲ ಪುಟದಿಂದ) ಅವಧಿ ಮುಗಿದಿದ್ದರೂ ಅದನ್ನು ವಾಪಸ್ ಪಡೆದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.
ಕೊಡಗು ಬೆಳೆಗಾರ ಒಕ್ಕೂಟದ ತಾಂತ್ರಿಕ ಸಲಹೆಗಾರ ಶರಿಸುಬ್ಬಯ್ಯ ಮಾತನಾಡಿ, ರಾಜ್ಯ ಆಡಿಟಿಂಗ್ ಜನರಲ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೊಡಗಿನಲ್ಲಿ ಕಾಫಿ ತೋಟ ಹಾಗೂ ಭತ್ತದ ಗದ್ದೆ ಭೂ ಪರಿವರ್ತನೆಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಈ ಬಗ್ಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದ್ದಾರೆ. ೨೦೧೧ರಿಂದ ಆಗಿರುವ ಭೂಪರಿವರ್ತನೆ ಕಾನೂನು ಬಾಹಿರವಾಗಿದೆ ಎಂದು ನೋಟಿಸಿನಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಕಾಫಿ ಹಾಗೂ ಭತ್ತದ ಗದ್ದೆಯನ್ನು ಭೂಪರಿವರ್ತನೆ ಮಾಡುವ ಅಧಿಕಾರ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಕಾನೂನು ಉಲ್ಲಂಘಿಸಿ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕಾರಣಿಗಳ ಇಚ್ಚಾಶÀಕ್ತಿ ಕೊರತೆ ಹಾಗೂ ಓಟ್ ಬ್ಯಾಂಕ್ ರಾಜಕೀಯದಿಂದ ತಿತಿಮತಿ ವ್ಯಾಪ್ತಿಯಲ್ಲಿ ಕಾಡಾನೆ ನುಸಳುತಡೆಗೆ ರೈಲ್ವೇ ಬ್ಯಾರಿಕೇಡ್ ಬೇಲಿ ಮಂಜೂರಾಗಿದ್ದರೂ, ಕಾಮಗಾರಿಗೆ ತಡೆಯುಂಟು ಮಾಡಲಾಗುತ್ತಿದೆ. ಇದರಿಂದ ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ ಎಂದು ಹೇಳಿದರು.
ನಾಪೋಕ್ಲು ಬೆಳೆಗಾರ ಪಾಂಡAಡ ನರೇಶ್ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳಿಗೆ ಕಾಂಗ್ರೆಸ್, ಬಿಜೆಪಿ, ದಳ ಎಂಬ ರಾಜಕೀಯ ಬೇಡ. ಇಲ್ಲಿನ ಮೂಲ ನಿವಾಸಿಗಳನ್ನು ರಕ್ಷಿಸಬೇಕಾಗಿದೆ. ಹಣದ ಬಲದಿಂದ ಕೊಡಗನ್ನು ನಾಶ ಮಾಡಲು ಷಡ್ಯಂತರ ನಡೆದಿದೆ. ಅನುಮತಿ ಇಲ್ಲದಿದ್ದರೂ, ಕೊಡಗಿನಲ್ಲಿ ಕೆಲವು ರೆಸಾರ್ಟ್ಗಳನ್ನು ನಡೆಸಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಅಧಿಕಾರಿಗಳು ಮೌನವಹಿಸಿದ್ದಾರೆ. ಕೊಡಗು ಪ್ರವಾಸೋದ್ಯಮದ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ್ಕೇರಿ ಗ್ರಾಮದ ವಿಟ್ಟಲ್ ಕಾವೇರಪ್ಪ ಮಾತನಾಡಿ, ಅತ್ಯಂತ ಸುರಕ್ಷಿತವಾಗಿದ್ದ ಕೊಡಗು ಇಂದು ಭೂಕಂಪ, ಭೂಕುಸಿತದಂತಹ ಪ್ರಾಕೃತಿಕ ವಿಕೋಪದ ಆತಂಕದ ಪ್ರದೇಶವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕೊಡಗನ್ನು ನಾಶ ಮಾಡಲಾಗುತ್ತಿದೆ. ಹೊಸ್ಕೇರಿಯಲ್ಲಿ ಅಂರ್ರಾಷ್ಟಿçÃಯ ಶಾಲೆ ನಿರ್ಮಿಸಲು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸಹಕರಿಸುತ್ತಿದ್ದಾರೆ. ಭೂ ಪರಿವರ್ತನೆಯನ್ನು ನಿಲ್ಲಿಸಬೇಕು. ಜಾಗದ ಮೌಲ್ಯ ಹೆಚ್ಚಾಗುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನ ಇಲ್ಲ. ದುಬಾರಿ ದರದಲ್ಲಿ ಜಾಗ ಖರೀದಿಸಲು ಸ್ಥಳೀಯರಿಗೆ ಶಕ್ತಿ ಇಲ್ಲ ಎಂದು ಹೇಳಿದರು.
ಹೊಸ್ಕೇರಿ ಗ್ರಾಮದ ಮಂಡೇಪAಡ ಕುಟ್ಟಣ್ಣ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದವರು ಹೊಸ್ಕೇರಿ ಅಂರ್ರಾಷ್ಟಿçÃಯ ಶಾಲೆಗೆ ಭೂ ಪರಿವರ್ತನೆ ಅವಕಾಶ ನೀಡಿಲ್ಲ. ಆದರೆ ರಾಜಕಾರಣಿಗಳಿಗೆ ಬೇಕಾದಂತಹ ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕರೆತಂದು ಭೂ ಪರಿವರ್ತನೆ ಮಾಡಿಸಲು ಮುಂದಾಗಿದ್ದಾರೆ. ಜಿಲ್ಲೆಗೆ ಐಎಎಸ್ ಐ.ಎಫ್.ಎಸ್ ಅಧಿಕಾರಿಗಳೇ ಬರಬೇಕು. ಪ್ರಮೋಟರ್ಸ್ಗಳಿಂದ ಜಿಲ್ಲೆಯ ಹಿತರಕ್ಷಣೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಕೈಕೇರಿಯ ಜಮ್ಮಡ ಗಣೇಶ್ ಅಯ್ಯಣ್ಣ ಮಾತನಾಡಿ, ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾಯಿಸಲಾಗುತ್ತಿದೆ. ಒಳ್ಳೆಯ ಅಧಿಕಾರಿಗಳಿಗೆ ಜಿಲ್ಲೆಯ ಜನರು ಬೆಂಬಲಿಸಿ ಅವರನ್ನು ವರ್ಗಾಯಿಸುವ ಸಂದರ್ಭ ಪ್ರತಿಭಟಿಸಬೇಕು ಎಂದರು.
ಜಿಲ್ಲಾ ಸತ್ಯಾನ್ವೇಷಣೆ ಸಂಸ್ಥೆಯ ಕೇಟೋಳಿರ ಸನ್ನಿಸೋಮಣ್ಣ ಮಾತನಾಡಿ, ಹೊಸ್ಕೇರಿ ಶಾಲೆ ಹೆಸರಿನಲ್ಲಿ ಹೊಟೇಲ್, ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಗೆಸ್ಟ್ ಹೌಸ್ಗಳನ್ನು ನಿರ್ಮಿಸಲು ಅನುಮತಿ ಕೋರಲಾಗಿದೆ. ಇದು ಯಾವ ರೀತಿಯ ಶಾಲೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಶೇ. ೯೦ರಷ್ಟು ಕಾನೂನು ಬಾಹಿರವಾಗಿ ಭೂ ಪರಿವರ್ತನೆ ಮಾಡಲಾಗಿದೆ. ಕೆಲವು ರೆಸಾರ್ಟ್ಗೆ ಇಂದಿಗೂ ಲೈನ್ಮನೆಗೆ ಅನುಮತಿ ಸಿಕ್ಕಿದೆ ಹೊರತು ರೆಸಾರ್ಟ್ ನಿರ್ಮಾಣಕ್ಕೆ ಪಡೆದಿಲ.್ಲ ನಾವು ನಂಬಿ ಕಳುಹಿಸಿದ ಜನಪ್ರತಿನಿಧಿಗಳೇ ಜಿಲ್ಲೆಗೆ ಮಾರಕವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಗ್ರೀನ್ ಸಿಟಿ ಫೋರಂನ ಚೇಯಂಡ ಸತ್ಯ ಮಾತನಾಡಿ, ಎಲ್ಲಾ ಸಂಘ ಸಂಸ್ಥೆಗಳಗಳನ್ನು ಸೇರಿಸಿ ಕೊಡಗಿನ ರಕ್ಷಣೆಗೆ ರೂಪುರೇಷೆ ಮಾಡಬೇಕು ಎಂದು ಹೇಳಿದರು.
ಯುಕೊ ಸಂಘಟನೆಯ ಅಧ್ಯಕ್ಷ ಮಂಜು ಚಿಣ್ಣಪ್ಪ ಮಾತನಾಡಿ, ನಮ್ಮ ನೆಲದ ಮೇಲೆ ನಮಗೆ ಪ್ರೀತಿ ಇರಬೇಕು. ಇದ್ದರೆ ಅದನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ನುಡಿದರು.
ಸಭೆಯ ನಿರ್ಣಯವನ್ನು ಸರ್ಕಾರ ಮಟ್ಟಕ್ಕೆ ತಲುಪಿಸುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವನ್ಯ ಪ್ರಾಣಿ, ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ, ಕೊಡಗಿನಲ್ಲಿ ಕಾನೂನು ಬಾಹಿರ ಭೂಪರಿವರ್ತನೆಗೆ ತಡೆ ಮತ್ತು ಜಿಲ್ಲೆಗೆ ಮಾರಕ ಯೋಜನೆಗಳಾದ ರೈಲು ಹಾಗೂ ಬಹುಪಥ ಹೆದ್ದಾರಿ ತಡೆಗೆ ಆಗ್ರಹಿಸಿ ಜಾಗೃತಿ ಸಭೆಯನ್ನು ನಡೆಸಿ ಜಿಲ್ಲೆಯ ಜನರ ರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ಜನಾಂದೋಲನವಾಗಿ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ, ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ವಾಸು ಉತ್ತಪ್ಪ, ತಿತಿಮತಿ ದೇವರಪುರ ಗ್ರೀನ್ ವಿಲೇಜ್ ಫೋರಂ ಅಧ್ಯಕ್ಷ ಮನೆಯಪಂಡ ಸುಬ್ಬಯ್ಯ, ಅಮ್ಮತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಚೊಟ್ಟೆಯಂಡಮಾಡ ವಿಶ್ವನಾಥ್, ಭಾರತೀಯ ಕಿಸಾನ್ ಸಂಘ ಜಿಲ್ಲಾಧ್ಯಕ್ಷ ಪ್ರವೀಣ್ಭೀಮಯ್ಯ, ಕ್ಗ್ಗಟ್ನಾಡು ಕೊಡವ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿಮ್ಮಿ ಅಯ್ಯಣ್ಣ, ನಾಲ್ಕೇರಿ ಬಾಡಗ ಸಾಂಸ್ಕೃತಿಕ ಸಂಘದ ಗುಡಿಯಂಗಡ ನಾಚಪ್ಪ ಹಾಜರಿದ್ದರು. ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ರಾಜೀವ್ ಬೋಪಯ್ಯ ಸ್ವಾಗತಿಸಿದರು. ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ವಂದಿಸಿದರು.