ನಾಪೋಕ್ಲು, ಜು. ೫: ಕೊಡಗಿನಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಭತ್ತದ ಬೇಸಾಯ ಕೆಲಸದಲ್ಲಿ ರೈತರು ತಲ್ಲೀನರಾಗಿದ್ದಾರೆ. ಜಿಲ್ಲೆಯ ಹಲವೆಡೆ ಬಿತ್ತನೆ ಕಾರ್ಯಗಳು ನಡೆಯುತ್ತಿದ್ದರೆ, ಕುಂಬಳದಾಳು ಗ್ರಾಮದಲ್ಲಿ ರೈತರು ಭತ್ತದ ನಾಟಿ ಕೆಲಸ ಆರಂಭಿಸಿದ್ದಾರೆ.
ಕೆಲವು ದಿನಗಳಿಂದ ಮಳೆ ಬಿರುಸುಗೊಂಡಿದ್ದು ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯವನ್ನು ಕೈಗೊಳ್ಳಲಾಯಿತು. ಈ ವರ್ಷ ಹೋಬಳಿ ವ್ಯಾಪ್ತಿಯ ಪ್ರಥಮ ನಾಟಿ ಇದಾಗಿದ್ದು, ರೈತರು ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು.ಕುಯ್ಯAಗೇರಿ ಗ್ರ್ರಾಮ ವ್ಯಾಪ್ತಿಯಲ್ಲಿ ಆರಂಭದಲ್ಲಿಯೇ ಬಿತ್ತನೆ ಮಾಡಿರುವ ರೈತರು ಇದೀಗ ಕೂಡು ನಾಟಿ ಪದ್ಧತಿಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದಾರೆ. ಪರಸ್ಪರ ಸಹಕಾರ ತತ್ವದಿಂದ ನಾಟಿ ಮಾಡಲಾಗುತ್ತಿದ್ದು ಭತ್ತದ ಕೃಷಿಕಾರ್ಯ ಸಾಗುತ್ತಿದೆ.
ಭತ್ತದ ಕೃಷಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ರೈತ ಚಿಲ್ಲನ ಕುಮಾರಪ್ಪ ಮಾತನಾಡಿ ಭತ್ತದ ಕೃಷಿಗಾಗಿ ಯಾವುದೇ ಯಂತ್ರೋಪಕರಣ ಬಳಸುತ್ತಿಲ್ಲ. ಸಾವಯವ ಗೊಬ್ಬರವನ್ನು ಬಳಸುತ್ತಿದ್ದೇವೆ ಎಂದರು. ಈಚೆಗೆ ಭತ್ತದ ಕೃಷಿ ಸುಲಭವಾಗಿ ಸಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಭಾವದಿಂದ ಬೇಸಾಯಕ್ಕೆ ಅಧಿಕ ಖರ್ಚು ತಗಲುತ್ತಿದೆ. ಕುಯ್ಯಂಗೇರಿ ಗ್ರಾಮದಲ್ಲಿ ಶೇ.೯೦ ರಷ್ಟು ಮಂದಿ ಭತ್ತದ ಬೇಸಾಯ ಮಾಡುತ್ತಿದ್ದಾರೆ.
ರಾಜಮುಡಿ, ದೊಡ್ಡಿ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು ಮನೆ ಬಳಕೆಗೆ ಅಗತ್ಯವಿರುವಷ್ಟು ಇರಿಸಿಕೊಂಡು ಉಳಿದುದನ್ನು ಮಾರಾಟ ಮಾಡಲಾಗುತ್ತಿದೆ ಎಂದರು. ಹಲವು ವರ್ಷಗಳಿಂದ ಭತ್ತದ ಬೇಸಾಯ ನಡೆಸುತ್ತಿದ್ದು ಜೂನ್ ಮೊದಲ ವಾರದಲ್ಲಿ ಬಿತ್ತನೆ ಕೈಗೊಂಡು ೨೩ ದಿನಗಳ ಬಳಿಕ ಸಸಿಮಡಿಗಳಿಂದ ಪೈರನ್ನು ತೆಗೆದು ನಾಟಿ ಮಾಡಲಾಗುತ್ತಿದೆ ಎಂದರು. ಹಲವು ಗ್ರಾಮಗಳಲ್ಲಿ ಇದೀಗ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಕುಯ್ಯಂಗೇರಿ ಗ್ರಾಮದಲ್ಲಿ ನಾಟಿ ಕಾರ್ಯ ಬಿರುಸಿನಿಂದ ಸಾಗುತ್ತಿರುವುದು ವಿಶೇಷ.
- ದುಗ್ಗಳ