ವೀರಾಜಪೇಟೆ, ಜು. ೬: ಅಕ್ರಮವಾಗಿ ಕೇರಳ ರಾಜ್ಯದಿಂದ ಲಾಟರಿ ಟಿಕೇಟ್ಗಳನ್ನು ಖರೀದಿಸಿ ಸಿದ್ದಾಪುರ ಪಟ್ಟಣದಲ್ಲಿ ಮಾರಾಟ ಮಾಡಲು ಯತ್ನಿಸುತಿದ್ದ ವ್ಯಕ್ತಿಯನ್ನು ಬಂಧಿಸಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಎಂ.ಬಿ. ಮಕ್ಬಾಲ್ (೩೩) ಬಂಧಿತ ವ್ಯಕ್ತಿ.
ಕೇರಳ ರಾಜ್ಯದ ಇರಿಟ್ಟಿ ಪಟ್ಟಣದಿಂದ ಲಾಟರಿ ಖರೀದಿಸಿ ಸಿದ್ದಾಪುರ ಮತ್ತು ಅಮ್ಮತ್ತಿ ನಗರದಲ್ಲಿ ಲಾಟರಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ, ವ್ಯಕ್ತಿಯಿಂದ ಕೇರಳ ರಾಜ್ಯದ ಸುಮಾರು ೨೭,೦೦೦ ರೂ.ಗಳ ಮೌಲ್ಯದ ಲಾಟರಿ ಟಿಕೆಟ್ಗಳನ್ನು ವಶಕ್ಕೆ ಪಡೆದಿದ್ದು, ಬಂಧಿತನ ಮೇಲೆ ಕರ್ನಾಟಕ ರಾಜ್ಯ ಲಾಟರಿ ನಿಷೇಧ ಕಾಯ್ದೆ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.