ಸೋಮವಾರಪೇಟೆ, ಜು.೬: ಕುಗ್ರಾಮಗಳಿಗೂ ಸಹ ರಸ್ತೆ ಹಾಗೂ ಸೇತುವೆ ಸಂಪರ್ಕ ಕಲ್ಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದಡಿ ಬಿಜೆಪಿ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ತಾಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕರು, ಬಿಜೆಪಿ ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮಗಳು ಉದ್ದಾರವಾಗಬೇಕಾದರೆ ಉತ್ತಮ ಸಾರಿಗೆ ಸೌಕರ್ಯ ಇರಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಕುಗ್ರಾಮಗಳೆಂದೆ ಕರೆಯಲ್ಪಡುತ್ತಿದ್ದ ಗ್ರಾಮಗಳಿಗೂ ಇದೀಗ ಉತ್ತಮ ರಸ್ತೆ, ಸೇತುವೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ತಮ್ಮ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಇದೇ ಸಂದರ್ಭ ಶಾಸಕರು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಮೂಲಕ ಪಶ್ಚಿಮ ವಾಹಿನಿ ಯೋಜನೆಯಡಿ ಯಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ತಾಲೂಕಿನ ಕುಡಿಗಾಣ, ಬೆಂಕಳ್ಳಿ, ಕುಮಾರಳ್ಳಿ ಗ್ರಾಮಗಳ ಸೇತುವೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.
ಪಶ್ಚಿಮ ವಾಹಿನಿ ಯೋಜನೆಯಡಿ ಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಕುಡಿಗಾಣದಲ್ಲಿ ರೂ. ೩.೮೦ಕೋಟಿ, ಚಿಕ್ಕಕಂಡಿಯಲ್ಲಿ ೨.೫೦ ಕೋಟಿ, ಕುಮಾರಳ್ಳಿಯಲ್ಲಿ ೨ ಕೋಟಿ, ಬೆಂಕಳ್ಳಿಯಲ್ಲಿ ೩.೫೦ ಕೋಟಿ ಸೇರಿದಂತೆ ಒಟ್ಟು ೧೧.೮೦ ಕೋಟಿ ವೆಚ್ಚದಲ್ಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಮಳೆಗಾಲದಲ್ಲಿ ಈ ಹಿಂದೆ ಇದ್ದ ಸೇತುವೆಗಳು ಮುಳುಗಿ ಸಂಚಾರ ಕಡಿತಗೊಳ್ಳುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ನೂತನ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜೀ ಸದಸ್ಯ ಧರ್ಮಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.