*ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಮತ್ತು ಕುಟ್ಟ ಪ್ರಾಥಮಿಕ ಸರ್ಕಾರ ಶಾಲೆಯ ಮುಖ್ಯೋಪಾಧ್ಯಾಯ ಶಶಿಧರ್ ಅವರನ್ನು ಪರಿಸರ ಮತ್ತು ಶಿಕ್ಷಣದಲ್ಲಿನ ಉತ್ತಮ ಸೇವೆಗಾಗಿ ಕೃತಗ್ಯಾತ ಟ್ರಸ್ಟ್ ವತಿಯಿಂದ ಶಾಸಕ ಕೆ.ಜಿ. ಬೋಪಯ್ಯ ಅವರು ಸನ್ಮಾನಿಸಿದರು. ಕುಟ್ಟ ಪ್ರಾಥಮಿಕ ಶಾಲಾ ಆವರಣದಲ್ಲಿ ಕೃತಗ್ಯಾತ ಟ್ರಸ್ಟ್ ಹಮ್ಮಿಕೊಂಡಿದ್ದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಮರಗಿಡಗಳು ಮತ್ತು ಔಷಧಿ ಸಸ್ಯಗಳನ್ನು ನೆಟ್ಟು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ಕೃಷ್ಣ ಚೈತನ್ಯ ಸನ್ಮಾನಕ್ಕೆ ಭಾಜನರಾದರು. ಕುಟ್ಟ ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಮೂಲಕ ಸ್ಥಳೀಯ ಕಾರ್ಮಿಕ ವರ್ಗದ ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿ ರುವ ಕಾರಣ ಶಶಿಧರ್ ಸನ್ಮಾನ ಪಡೆದುಕೊಂಡರು.

ಈ ಸಂದರ್ಭ ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರತೀಶ್‌ಗಣಪತಿ, ಉಪಾಧ್ಯಕ್ಷೆ ದಿವ್ಯ, ಸದಸ್ಯ ತೀತಿರ ತೀರ್ಥ ಮಂಜುನಾಥ್, ಸಹ ಶಿಕ್ಷಕರುಗಳಾದ ಶಕುಂತಲಾ, ಸಜನಿ, ಲವಿನ್, ಸವಿತಾಕುಮಾರಿ, ಕೃತಗ್ಯಾತ ಟ್ರಸ್ಟ್ನ ಟ್ರಸ್ಟಿಗಳಾದ ಅರುಣ್ ದಿವಾಕರ್, ಮುರುಳಿದರ್, ಪ್ರಮುಖರಾದ ಪೆಮ್ಮಣಮಾಡ ನವೀನ್, ಶಕ್ತಿ ಕೇಂದ್ರದ ಪ್ರಮುಖ್ ತೀತಿರ ಮಂಜುನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಉಪಸ್ಥಿತರಿದ್ದರು.