ಮಡಿಕೇರಿ, ಜು. 2: ಖಾಸಗಿ ಬಸ್ ಚಾಲಕರಾಗಿದ್ದು, ಮೊನ್ನೆ ನಗರದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದ ನಾರಾಯಣ ಅವರ ಅಂತ್ಯಕ್ರಿಯೆಗೆ ಮಡಿಕೇರಿಯ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಸ್ಪಂದಿಸಿದ್ದಾರೆ.

ಮಡಿಕೇರಿ ನಗರ ಪೊಲೀಸರ ಸಹಕಾರದೊಂದಿಗೆ ಸಂಘದ ಪದಾಧಿಕಾರಿಗಳು ಮರಣೋತ್ತರ ಪರೀಕ್ಷೆ ಸೇರಿದಂತೆ ಇತರ ಪ್ರಕ್ರಿಯೆ ಪೂರೈಸಿ ನಿನ್ನೆ ನಗರದ ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ವಿಧಿ-ವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೃತ ನಾರಾಯಣ ಅವರು ಒಂಟಿಯಾಗಿದ್ದ ಹಿನ್ನೆಲೆ ಇವರಿಗೆ ಸಂಘದವರು ಸ್ಪಂದಿಸಿದ್ದಾರೆ. ಸೇವಾಭಾರತಿ ಸಂಸ್ಥೆಯವರು ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟರು. ಭರತ್, ಉಮೇಶ್, ಮಂಜುನಾಥ್, ವಿಜಯ, ಲಿಂಗಪ್ಪ, ನಾಗೇಂದ್ರ, ದೇವಯ್ಯ, ತಿಮ್ಮಯ್ಯ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಕೈಜೊಡಿಸಿದ್ದರು.