ಸುಂಟಿಕೊಪ್ಪ, ಜು. 2: ಸಮೀಪದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಕಲ್ಲುಕೋರೆ ರಸ್ತೆಯಲ್ಲಿರುವ ದೀಪ್ತಿ ಶಾಲೆಗೆ ಶನಿವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಒಂಟಿ ಸಲಗವೊಂದು ದಿಢೀರನೆ ಆಗಮಿಸಿ ಶಾಲೆಯ ಗೇಟನ್ನು ಕಾಲಿನಿಂದ ಒದ್ದು ಬೀಗವನ್ನು ಮುರಿದು ನುಗ್ಗಿ ಶಾಲಾ ಮೈದಾನಕ್ಕೆ ಸುತ್ತು ಹೊಡೆದು ನಂತರ ಅಲ್ಲಿಂದ ಹೊರ ಬಂದು ನೇರವಾಗಿ ಕಲ್ಲುಕೋರೆ ರಸ್ತೆಯಲ್ಲಿ ಸಾಗಿದ ಘಟನೆ ನಡೆದಿದೆ. ಶಾಲಾ ಮಕ್ಕಳು ಶಾಲೆಗೆ ಬರುವ ಸಂದರ್ಭ ಆಗಮಿಸಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೊಸಕೋಟೆ ಗ್ರಾಮದ ಮಟ್ನಳ್ಳದಿಂದ ಅಂದಗೋವೆ ಪೈಸಾರಿಗೆ ತೆರಳುವ ರಸ್ತೆಯಲ್ಲಿ ಹಗಲಿನಲ್ಲಿ ಆನೆ ಕಂಡು ಬರುತ್ತಿದ್ದು ಈ ಭಾಗದ ರಸ್ತೆ ಬದಿಯಲ್ಲಿ ಹಲವಾರು ಕೃಷಿಕರು ಕೂಲಿ ಕಾರ್ಮಿಕರ ಮನೆಗಳಿದ್ದು ಇಲ್ಲಿನ ಗ್ರಾಮಸ್ಥರು ಜೀವ ಭಯದಿಂದ ದಿನ ದೂಡುವಂತಾಗಿದೆ. ದಿನ ನಿತ್ಯ ಕಾಡಿನಿಂದ ಕಾಡಾನೆಗಳು ನಾಡಿಗೆ ಆಗಮಿಸುತ್ತಿದ್ದರೂ ಅರಣ್ಯ ಇಲಾಖೆ ಮೌನವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯಾಧಿಕಾರಿಗಳು ಆನೆಗಳು ಬರದಂತೆ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು, ಕೃಷಿಕರು ಸೇರಿ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.