ಕಣಿವೆ, ಜು. ೧: ಕುಶಾಲನಗರ ತಾಲೂಕು ಕೇಂದ್ರದ ಸ್ಥಳೀಯ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸ್ವಚ್ಛತೆಯನ್ನು ಬಹಿಷ್ಕರಿಸಿ ನೇರ ನೇಮಕಾತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ.

ಈ ಕುರಿತು ಮಾತನಾಡಿದ ಹೊರಗುತ್ತಿಗೆದಾರರ ಸಂಘದ ಅಧ್ಯಕ್ಷ ಹೆಚ್.ಎಸ್. ದಾಸ ಹಲವಾರು ವರ್ಷಗಳಿಂದ ನಗರಸಭೆ, ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ವಾಹನ ಚಾಲಕರು, ವಾಟರ್ ಮ್ಯಾನ್, ಲೀಡರ್ಸ್, ಕ್ಲೀನರ್ಸ್, ಯುಜಿಡಿ ಕಾರ್ಮಿಕರು, ಹೆಲ್ಪರ್ಸ್, ಡೇಟಾ ಆಪರೇಟರ್‌ಗಳು ಅಲ್ಪ ಪ್ರಮಾಣದ ವೇತನದ ಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಪ ಪ್ರಮಾಣದ ವೇತನದಿಂದ ಜೀವನ ಸಾಗಿಸಲು ದುಸ್ತರವಾಗಿದೆ. ಅತ್ಯಂತ ಪರಿಶ್ರಮದಿಂದ ಕಾರ್ಯನಿರ್ವಹಿಸುವ ನಮಗೆ ವೇತನವು ಸಾಕಾಗುತಿಲ್ಲ. ಹಾಗೂ ನಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ದೊರಕುತ್ತಿಲ್ಲ. ನೇರ ವೇತನದಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗಿಂತಲೂ ಅತಿ ಹೆಚ್ಚಿನ ಶ್ರಮವಹಿಸಿ ದುಡಿಯುವ ನಮಗೆ, ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ನಮಗೂ ಕೂಡ ದೊರಕಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಾದ್ಯಂತ ರಾಜ್ಯಧ್ಯಕ್ಷ ಎಂ.ಟಿ. ನಾಗಣ್ಣಗೌಡ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆಯೇ ಇಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅರೆಕಾಲಿಕ ಕಾರ್ಮಿಕರು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗವು ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ವಿಶ್ವ, ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ಗಣೇಶ್ ಎ., ಸದಸ್ಯರಾದ ನಾಗರಾಜ. ಸತೀಶ, ರಾಮ, ರಘು, ರಾಜೇಂದ್ರ, ಮಣಿಕಂಠ, ಮುರುಗೇಶ, ಪುನೀತ್, ಬಸವರಾಜ, ಚಂದ್ರ, ವೆಂಕಟೇಶ ಇದ್ದರು.