ಗೋಣಿಕೊಪ್ಪಲು, ಜು. 2: ದ.ಕೊಡಗಿನ ಕೆ.ಬಾಡಗ ಬಳಿಯ ಕಾಫಿ ತೋಟವೊಂದರಲ್ಲಿ ಗಂಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ವನ್ಯಜೀವಿ ವಿಭಾಗದ ಡಿಎಫ್ಓ ಶಿವರಾಮ್ ಬಾಬು ಹಾಗೂ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಆಗಮಿಸಿದ ನಾಗರಹೊಳೆ ವನ್ಯಜೀವಿ ವಿಭಾಗದ ಡಾ. ಚಿಟ್ಟಿಯಪ್ಪ ಹಾಗೂ ಸ್ಥಳೀಯ ಪಶುವೈದ್ಯ ಅಧಿಕಾರಿ ಗಿರೀಶ್ ಆನೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಯಿತು.
ವಿದ್ಯುತ್ ಸ್ಪರ್ಶ-ಗಂಡಾನೆ ಸಾವು
(ಮೊದಲ ಪುಟದಿಂದ) ವೀರಾಜಪೇಟೆ ಅರಣ್ಯ ವಿಭಾಗಕ್ಕೆ ಒಳಪಡುವ ಈ ಪ್ರದೇಶವು ನಾಗರಹೊಳೆ ವನ್ಯ ಜೀವಿ ವಿಭಾಗಕ್ಕೆ ಮೂರು ಕಿ.ಮೀ. ದೂರದಲ್ಲಿದೆ. ಬಹುತೇಕ ಕಾಡಾನೆಗಳು ಅರಣ್ಯ ಪ್ರದೇಶದಿಂದ ಆಗಮಿಸಿ ಸುತ್ತಮುತ್ತಲಿನ ರೈತರ ಕಾಫಿ ತೋಟದಲ್ಲಿ ನೆಲೆ ಕಂಡುಕೊಂಡಿವೆ. ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ಗಳಲ್ಲಿನ ಕೆಲವು ತಂತಿಗಳು ತೀರಾ ಕೆಳ ಭಾಗದಲ್ಲಿ ಇರುವುದರಿಂದ ದೊಡ್ಡ ಪ್ರಮಾಣದ ಕಾಡಾನೆಗಳು ಸಂಚರಿಸುವ ವೇಳೆ ಇಂತಹ ತಂತಿಗೆ ತಗುಲಿ ಸಾವನ್ನಪ್ಪುತ್ತಿವೆ.