ಗೋಣಿಕೊಪ್ಪಲು, ಜು. 2: ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಕಚೇರಿಯಲ್ಲಿದ್ದ ಕೆಲವು ದಾಖಲೆಗಳ ಹಾಳೆಯನ್ನು ಹರಿದು ಹಾಕಿದ ಆರೋಪದಡಿ ಪ್ರಸ್ತುತ ಕರಿಕೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ತಿಮ್ಮಯ್ಯ ಎಂಬವರ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆಯ ವೇಳೆಯಲ್ಲಿ ಈ ಹಿಂದೆ ಪಿಡಿಓ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ತಿಮ್ಮಯ್ಯ ಎಂಬವರು ಹಾತೂರು ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಕೊಠಡಿಗೆ ತೆರಳಿ ಅಲ್ಲಿದ್ದ ಪಂಚಾಯಿತಿಯ ನಡಾವಳಿ ಪುಸ್ತಕವನ್ನು ತೋರಿಸುವಂತೆ ತಿಮ್ಮಯ್ಯನವರು ಕೇಳಿದ್ದಾರೆ. ಅಲ್ಲದೆ ನಡಾವಳಿ ಪುಸ್ತಕದಲ್ಲಿರುವ ಕೆಲವು ಪದಗಳನ್ನು ಅಳಿಸಿ ಹಾಕುವಂತೆ ತಿಳಿಸಿದ್ದಾರೆ. ಇದಕ್ಕೆ ಕರ್ತವ್ಯದಲ್ಲಿದ್ದ ಪ್ರಭಾರ ಪಿಡಿಓ ನಿರಾಕರಿಸಿ, ನಡಾವಳಿ ಪುಸ್ತಕದಲ್ಲಿ ನಮೂದಾಗಿರುವ ಪದಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಈ ಮಾತಿಗೆ ಅಸಮಾಧಾನಗೊಂಡ ತಿಮ್ಮಯ್ಯ ಅಲ್ಲಿದ್ದ ನಡಾವಳಿ ಪುಸ್ತಕವನ್ನು
(ಮೊದಲ ಪುಟದಿಂದ) ತೆಗೆದುಕೊಂಡು ಅದರಲ್ಲಿದ್ದ ಕೆಲವು ಪುಟಗಳನ್ನು ಹರಿದು ತಮ್ಮ ಜೇಬಿನಲ್ಲಿ ಹಾಕಿಕೊಂಡು ಪಿಡಿಓ ಕೊಠಡಿಯಿಂದ ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಪಂಚಾಯಿತಿಯಲ್ಲಿದ್ದ ಅತ್ತೂರು ಗ್ರಾಮದ ಸದಸ್ಯ ಚಿಣ್ಣಪ್ಪ ಎಂಬವರು ನಡಾವಳಿ ಪುಸ್ತಕವನ್ನು ತೆಗೆದುಕೊಂಡು ಹೋಗದಂತೆ ಹಾಗೂ ಪುಸ್ತಕವನ್ನು ಪಿಡಿಒನವರ ಟೇಬಲಿನ ಮೇಲೆ ಇಡುವಂತೆ ಹೇಳಿದಾಗ ಹರಿದಿರುವ ನಡಾವಳಿ ಪುಸ್ತಕದ ಪುಟವನ್ನು ಪೆನ್ಸಿಲ್ನಿಂದ ಕೆಲವು ಅಕ್ಷರಗಳು ಕಾಣದಂತೆ ಗೀಚಿ ಹರಿದಿದ್ದ ಪುಟವನ್ನು ಟೇಬಲಿನ ಮೇಲೆ ಬಿಸಾಡಿ ಆಕ್ರೋಶಗೊಂಡು ಪಂಚಾಯಿತಿ ಆವರಣದಿಂದ ತೆರಳಿದ್ದಾರೆ.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ದರ್ಶನ್ ಅವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ಹಿರಿಯ ಅಧಿಕಾರಿಗಳಾದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಿಗೂ ಈ ಮಾಹಿತಿಯನ್ನು ತಿಳಿಸಿದ್ದಾರೆ.
ಕರ್ತವ್ಯನಿರತನಾಗಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ದಾಖಲಾತಿಗಳನ್ನು ಹರಿದು ಹಾಕಿರುವ ಆರೋಪÀದ ಮೇಲೆ ತಿಮ್ಮಯ್ಯ ಅವರ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಅಧಿಕಾರಿ ನೀಡಿದ ದೂರಿನ ಅನ್ವಯ ತಿಮ್ಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿದ್ದ ತಿಮ್ಮಯ್ಯ ಕಳೆದ ಒಂದು ತಿಂಗಳ ಹಿಂದೆ ಕರಿಕೆ ಪಂಚಾಯಿತಿಗೆ ವರ್ಗಾವಣೆಗೊಂಡಿದ್ದರು.