ಮಡಿಕೇರಿ, ಜು. ೧: ಪ್ರಸ್ತುತ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಮಂಗಳೂರು ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಎರಡು ಭಾಗವಾಗಲಿದ್ದು, ಭವಿಷ್ಯದಲ್ಲಿ ಕೊಡಗು ವಿಶ್ವವಿದ್ಯಾಲಯ ಎಂಬ ಹೊಸ ವಿ.ವಿ. ಸ್ಥಾಪನೆಯಾಗಲಿದೆ. ಕಳೆದ ಬಜೆಟ್‌ನಲ್ಲಿ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಕುರಿತಂತೆ ರಾಜ್ಯ ಸರಕಾರ ಪ್ರಕಟಿಸಿದೆ. ಇದರಂತೆ ಈ ಕುರಿತ ಪ್ರಕ್ರಿಯೆಗಳು ನಡೆಯುತ್ತಿದ್ದು, ಸದ್ಯದಲ್ಲಿ ಕೊಡಗು ವಿ.ವಿ. ಅಸ್ತಿತ್ವಕ್ಕೆ ಬರಲಿದೆ. ರಾಜ್ಯ ಸರಕಾರದ ಬಜೆಟ್ ಘೋಷಣೆಯಂತೆ ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿ.ವಿ. ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಇನ್ನು ಮುಂದೆ ಕೊಡಗು ವಿಶ್ವವಿದ್ಯಾನಿಲಯ ಕ್ಯಾಂಪಸ್ ಆಗಲಿದೆ ಹಾಗೂ ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ವಿ.ವಿ.ಯ ಆಡಳಿತ ಕೇಂದ್ರವಾಗಲಿದೆ ಎನ್ನಲಾಗಿದೆ. ಈ ಕುರಿತಾದ ಕಾರ್ಯಯೋಜನೆಗಳು ಇದೀಗ ಪ್ರಗತಿಯಲ್ಲಿವೆ. ಈ ವರ್ಷಾಂತ್ಯ ಅಥವಾ ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ ಇದು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.

ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಂಗಳೂರು ವಿ.ವಿ.ಯ ರಿಜಿಸ್ಟಾçರ್ ಕಿಶೋರ್ ಕುಮಾರ್ ಅವರು ಸದ್ಯಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳ ವಿವರವನ್ನು ಕೇಳಲಾಗಿದೆ. ಬಜೆಟ್ ಘೋಷಣೆಯಾಗಿರುವುದರಿಂದ ಇದು ತ್ವರಿತವಾಗಲಿದೆ ಎಂದಿದ್ದಾರೆ.