ಮಡಿಕೇರಿ, ಜು. ೧: ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರಕಾರ ಜನರ ಸರ್ವಾಂಗೀಣ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಯ ಪ್ರಯೋಜನ ಪಡೆದುಕೊಂಡವರು ಇತರ ಅರ್ಹರಿಗೂ ತಿಳಿಸುವ ಮೂಲಕ ಎಲ್ಲಾ ವರ್ಗದವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸರಕಾರದೊಂದಿಗೆ ಕೈಜೋಡಿಸಬೇಕೆಂದು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ನಗರದ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಸರಕಾರದ ವಿವಿಧ ಯೋಜನೆಯ ಫಲಾನುಭವಿ ಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾನು ಹೋದ ಜಾಗದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಂವಾದ ನಡೆಸುತ್ತೇನೆ. ಕೊಡಗು ಜಿಲ್ಲೆಯ ಜನರ ಜೊತೆ ಸಂವಾದ ನಡೆಸುತ್ತಿರುವುದು ಖುಷಿ ತಂದಿದೆ ಎಂದರು.

ಹೂ ಮಾರಾಟಗಾರ್ತಿ ಮಾಲಮ್ಮ ಮಾತನಾಡಿ, ನಗರಸಭೆಯ ಅನುದಾನದಲ್ಲಿ ತನಗೆ ಮನೆ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಯ ಮೂಲಕ ರೂ. ೨.೭೦ ಲಕ್ಷ ಸಹಾಯಧನ ದೊರೆತಿದೆ ಎಂದರು.

ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಯೊಬ್ಬರು ಮಾತನಾಡಿ, ಕೋವಿಡ್ ಸಂದರ್ಭ ತನಗೆ ಮೊದಲ ಹಂತದಲ್ಲಿ ರೂ. ೧೦ ಸಾವಿರ, ೨ನೇ ಹಂತದಲ್ಲಿ ರೂ. ೨೦ ಸಾವಿರ ಸಾಲ ದೊರೆತಿತ್ತು. ಅದನ್ನು ತೀರಿಸಿದ ಹಿನ್ನೆಲೆ ಇದೀಗ ರೂ. ೫೦ ಸಾವಿರ ಸಾಲ ಮಂಜೂರಾತಿಯಾಗಿದೆ ಎಂದು ತಿಳಿಸಿದರು.

ನಗರಸಭೆ ಪೌರಕಾರ್ಮಿಕ ರಂಗಪ್ಪ ಮಾತನಾಡಿ, ತನ್ನ ಮಗಳು ಯುಪಿಎಸ್‌ಸಿ ತರಬೇತಿ ಪಡೆಯುತ್ತಿದ್ದು, ಸರಕಾರದಿಂದ ರೂ. ೧.೫೦ ಲಕ್ಷ ನೆರವು ದೊರೆತಿದೆ. ಮಗಳು ಉತ್ತಮವಾಗಿ ಓದುತ್ತಿದ್ದಾಳೆ. ಮಗ ಕೂಡ ಬಿ.ಟೆಕ್ ಮಾಡುತ್ತಿದ್ದು, ಸರಕಾರದ ನೆರವಿನಿಂದ ಮಕ್ಕಳು ಶಿಕ್ಷಣವಂತರಾಗುತ್ತಿದ್ದಾರೆ ಎಂದು ಹೇಳಿದರು. ಇದನ್ನು ಕೇಳಿದ ರಾಜ್ಯಪಾಲರು

(ಮೊದಲ ಪುಟದಿಂದ) ಪೌರಕಾರ್ಮಿಕನ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಿಂದ ಉಚಿತ ಆರೋಗ್ಯ ಸೇವೆ ದೊರೆತಿದೆ ಎಂದು ನಂಜುAಡ ಎಂಬವರು ಹೇಳಿದರು. ೨೦೧೮ರ ಮಹಾಮಳೆಯಲ್ಲಿ ಮನೆ ಕಳೆದುಕೊಂಡ ಯಶೋಧ ಎಂಬವರು ಮಾತನಾಡಿ, ಕರ್ಣಂಗೇರಿಯಲ್ಲಿ ಪುನರ್ವಸತಿ ಲಭ್ಯವಾಗಿದೆ. ನೈಸರ್ಗಿಕ ವಿಕೋಪದಲ್ಲಿ ತನ್ನ ಪತಿ ಮೃತಪಟ್ಟಿದ್ದು, ಸರಕಾರ ರೂ. ೫ ಲಕ್ಷ ನೆರವು ನೀಡಿದೆ ಎಂದು ವಿವರಿಸಿದರು.

೩ನೇ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಚಿರಾಗ್ ಮಾತನಾಡಿ, ರೂ. ೧೫ ಸಾವಿರ ಶಿಷ್ಯವೇತನ ಪ್ರತಿವರ್ಷ ಲಭ್ಯವಾಗುತ್ತಿದೆ ಇದರಿಂದ ಶಿಕ್ಷಣಕ್ಕೆ ಸಹಾಯವಾಗುತ್ತಿದೆ ಎಂದರು. ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಧರಣಿ, ಒಮ್ಮೆ ರೂ. ೪೫ ಸಾವಿರ, ಮತ್ತೊಮ್ಮೆ ರೂ. ೩೦ ಸಾವಿರ ವಿದ್ಯಾರ್ಥಿ ವೇತನ ಲಭಿಸಿದೆ. ಇದರಲ್ಲಿ ಕಂಪ್ಯೂಟರ್ ತರಬೇತಿ ಪಡೆದುಕೊಂಡ ಜೊತೆಗೆ ಶೈಕ್ಷಣಿಕವಾಗಿ ಬಳಸಿಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ೯ ಹಂತದಲ್ಲಿ ಮಾಸಿಕ ತಲಾ ರೂ. ೨ ಸಾವಿರ ಹಣ ದೊರೆತಿದೆ ಎಂದು ರೈತ ಶರತ್ ಕುಮಾರ್ ಹೇಳಿದರು. ಸಂಜೀವಿನಿ ಒಕ್ಕೂಟಕ್ಕೆ ಸರಕಾರದಿಂದ ರೂ. ೧೮ ಲಕ್ಷ ಬಿಡುಗಡೆಯಾಗಿ ಇದನ್ನು ಇತರ ಸಂಘಗಳಿಗೆ ಸಹಾಯಧನವಾಗಿ ನೀಡಲಾಗಿದೆ. ಈ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಯೋಜನೆ ಕಾರಣವಾಗಿದೆ ಎಂದು ಸಂಪಾಜೆಯ ಮೀನಾ ಕುಮಾರಿ ಹೇಳಿದರು. ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ಖರೀದಿಗೆ ರೂ. ೩ ಲಕ್ಷ ಸಬ್ಸಿಡಿ ದೊರೆತಿದೆ ಎಂದರು. ಇದೇ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ರಾಜ್ಯಪಾಲರಿಗೆ ಸನ್ಮಾನಿಸಿ ಗೌರವಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪವಿಭಾಗಧಿಕಾರಿ ಯತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ರಾಜ್ಯಪಾಲರ ಎಡಿಸಿ ತನ್ಮಯ್ ರಾಕಿ, ಒಎಸ್‌ಡಿ ಶಂಕರ್ ಲಾಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.