ಕೂಡಿಗೆ, ಜು. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಬಹುತೇಕ ಭರ್ತಿ ಯಾಗಿದ್ದು, ತಾ. ೨ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಾಗಿನ ಅರ್ಪಿಸಲಿದ್ದಾರೆ.೭.೭೦೮೮೩ ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಇಂದಿನ ನೀರಿನ ಮಟ್ಟ ೬.೫೫೮೩೬ ಸಂಗ್ರಹವಿದ್ದು, ಅಣೆಕಟ್ಟೆಯ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬಿಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ೫೭೮೫ ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, ಈಗಾಗಲೇ ಅಣೆಕಟ್ಟೆಯ ಒಳಹರಿವಿನ ಪ್ರಮಾಣವು ಹೆಚ್ಚಾಗಿರುವುದರಿಂದ ಮತ್ತು ಅಣೆಕಟ್ಟೆಯ
(ಮೊದಲ ಪುಟದಿಂದ) ಭದ್ರತೆಯ ಹಿತದೃಷ್ಟಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಅಣೆಕಟ್ಟೆಯ ಕ್ರೆಸ್ಟ್ಗೇಟ್ಗಳಿಗೆ ಪೂಜೆ ಸಲ್ಲಿಸಿ ಗೇಟ್ಗಳ ಮೂಲಕ ಹಾರಂಗಿ ನದಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟವು ಕೇವಲ ೩,೫೫೩೦೭ ಟಿಎಂಸಿ ಇತ್ತು. ಕಳೆದ ವರ್ಷ ಜುಲೈ ೧೬ ರಂದು ಪೂಜೆ ಸಲ್ಲಿಸಿ ನದಿಗೆ ನೀರು ಹರಿಸಲಾಗಿತ್ತು. ೨೮೫೯ ಅಡಿ ಅಣೆಕಟ್ಟೆಯಲ್ಲಿ ಪ್ರಸಕ್ತ ೨೮೫೬ ಅಡಿಗಳಷ್ಟು ನೀರಿದೆ. ೭.೩೦ ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸಕ್ತ ೬.೫೫ ಟಿಎಂಸಿ ನೀರಿನ ಸಂಗ್ರಹವಿದೆ.
ಹಾರAಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ. ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿರುವುದರಿAದ ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು.
ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕಾವೇರಿ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ.
ಮಳೆ ಇಳಿಮುಖ
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿತ್ತಾದರೂ ಶುಕ್ರವಾರದಂದು ಮಳೆ ಇಳಿಮುಖವಾದಂತಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇಂದು ಸಂಜೆತನಕವೂ ಹೆಚ್ಚು ಮಳೆಯಾಗಿಲ್ಲ.