*ಗೋಣಿಕೊಪ್ಪ, ಜು. ೧: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಪಿಯು ಕಾಲೇಜು ಪ್ರಥಮ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

‘ನನ್ನ ಶೈಕ್ಷಣಿಕ ಬೆಳವಣಿಗೆಯಲ್ಲಿ ಪತ್ರಿಕೆಯ ಪಾತ್ರ’ ಎಂಬ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಪಿಯು ಕಾಲೇಜಿನ ಎಂ.ಕೆ. ಡೀನಾ ಕಿರಣ್ ಪ್ರಥಮ ಸ್ಥಾನ ಪಡೆದುಕೊಂಡರು. ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಪಿಯು ಕಾಲೇಜಿನ ಎಸ್.ಆರ್. ನಿಕ್ಷೇಪ ದ್ವಿತೀಯ, ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಬಿ.ಜೆ. ಕ್ಷೇತ್ರ ತೃತೀಯ, ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಪಿಯು ಕಾಲೇಜಿನ ಬಿ.ಡಿ. ಭರತ್‌ಕುಮಾರ್ ನಾಲ್ಕನೇ ಬಹುಮಾನ ಪಡೆದುಕೊಂಡರು.

ಉಳಿದAತೆ ಅರುವತೋಕ್ಲು ಸರ್ವಧೈವತಾ, ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು, ಪೊನ್ನಂಪೇಟೆ ಸಾಯಿ ಶಂಕರ್ ಪದವಿಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು, ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ೮ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಾರಿತೋಷಕದೊಂದಿಗೆ ಪ್ರಥಮ ಸ್ಥಾನಕ್ಕೆ ೩ ಸಾವಿರ, ದ್ವಿತೀಯಕ್ಕೆ ೨ ಸಾವಿರ, ತೃತೀಯ ಹಾಗೂ ನಾಲ್ಕನೇ ಸ್ಥಾನಕ್ಕೆ ೧,೫೦೦ ನಗದು ಬಹುಮಾನ, ಸ್ಪರ್ಧಿಗಳಿಗೆ ಪ್ರಮಾಣ ಪತ್ರ, ಪ್ರಯಾಣ ಭತ್ಯೆ ನೀಡಲಾಯಿತು.

ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಕಾಲೇಜು ಪ್ರಾಂಶುಪಾಲ ಡಾ. ಬೆನ್ನಿ ಕೊರಿಯಕೊಸ್ ಉದ್ಘಾಟಸಿ ಮಾತನಾಡಿ, ಪದವಿಪೂರ್ವ ಶಿಕ್ಷಣ ಸಂದರ್ಭ ಸ್ಪರ್ಧೆಯಲ್ಲಿ ಭಾಗವಹಿಸಲು ಬೋಧಕರಿಂದ ಪ್ರೋತ್ಸಾಹ ದೊರೆಯುತ್ತದೆ. ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪ್ರೋತ್ಸಾಹ ಕಡಿಮೆ. ಆದ್ದರಿಂದ ಪಿಯು ಮಟ್ಟದಲ್ಲಿ ಸಾಕಷ್ಟು ಅವಕಾಶ ಸದುಪಯೋಗ ಪಡೆಸಿಕೊಳ್ಳಲು ವಿದ್ಯಾರ್ಥಿಗಳು ಉತ್ಸಾಹ ತೋರಬೇಕು ಎಂದರು.

ಕೂರ್ಗ್ ಪಬ್ಲಿಕ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮಾಚಿಮಾಡ ಎಂ. ತಿಮ್ಮಯ್ಯ ಬಹುಮಾನ ವಿತರಿಸಿ ಮಾತನಾಡಿ, ಪತ್ರಿಕೆ ಓದುವುದರಿಂದ ಮನಸ್ಸಿನಿಂದ ಚಿಂತನೆಗಳು ಹೊರ ಬರಲು ಸಹಾಯವಾಗುತ್ತಿದೆ. ಓದುವುದು ಮನಸ್ಸಿನಲ್ಲಿಯೇ ಹೆಚ್ಚು ಉಳಿಯುವುದರಿಂದ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ದೇಶದ ಅಭಿವೃದ್ಧಿಗೆ ಚರ್ಚೆ ಕೂಡ ಮುಖ್ಯವಾಗುತ್ತದೆ. ಒಂದು ನಿರ್ಧಾರ ತೆಗೆದುಕೊಳ್ಳಲು ಭಾಷಣ, ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಿಕೆ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ನಡೆಯುವ ವಿದ್ಯಮಾನ ಓದುಗರಿಗೆ ತಲುಪುತ್ತದೆ. ಸಮಾಜ ಹೇಗಿರುತ್ತದೋ ಅದನ್ನೆ ಮಾಧ್ಯಮ ತೋರಿಸುತ್ತದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಎಚ್. ಕೆ. ಜಗದೀಶ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಕಾರ್ಯಕ್ರಮ ಸಂಚಾಲಕ ಎಂ. ಎಂ. ಚನ್ನನಾಯಕ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಖಜಾಂಚಿ ವಿ.ವಿ. ಅರುಣ್‌ಕುಮಾರ್, ಕಾರ್ಯದರ್ಶಿ ಮಂಡೇಡ ಎಸ್. ಅಶೋಕ್ ಇದ್ದರು. ಸಂತೋಷ್ ಸ್ವಾಗತಿಸಿದರು. ಪ್ರತಿಮಾ ಚಂಗಪ್ಪ ಪ್ರಾರ್ಥಿಸಿದರು. ಎಚ್. ಆರ್. ಸತೀಶ್ ವಂದಿಸಿದರು.