ಸೋಮವಾರಪೇಟೆ, ಜು. ೧: ಕಳೆದ ಹಲವಾರು ದಶಕಗಳಿಂದ ಅರಣ್ಯ ದಂಚಿನಲ್ಲಿ ಜೀವನ ಕಂಡು ಕೊಂಡಿರುವ ಬಡ ಮಂದಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಣಗೂರು ಗ್ರಾ.ಪಂ. ಸದಸ್ಯ ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಸಂಚಾಲಕ ಜಿ.ಬಿ. ಸಿದ್ದಲಿಂಗಪ್ಪ ಅವರು, ಅರಣ್ಯದಂಚಿನ ರೈತರಿಗೆ ಭೂ ಹಿಡುವಳಿ ಹಕ್ಕುಪತ್ರವನ್ನು ಸಾಮೂಹಿಕವಾಗಿ ವಿತರಿಸಲು ಸರ್ಕಾರ ಮುಂದಾಗ ಬೇಕೆಂದು ಒತ್ತಾಯಿಸಿದರು. ಕೃಷಿಯನ್ನೇ ಅವಲಂಬಿಸಿರುವ ರೈತರು ಸುಮಾರು ೭೦ ರಿಂದ ೮೦ ವರ್ಷಗಳಿಂದ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದು, ಅಲ್ಲೇ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಬೌಂಡರಿ ಗುರುತು ಮಾಡಿದೆ. ಅರಣ್ಯದಂಚಿನ ಕೆಲವರಿಗೆ ಮಾತ್ರ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಗಿದ್ದು, ಇನ್ನೂ ನೂರಾರು ಮಂದಿಗೆ ಹಕ್ಕುಪತ್ರ ನೀಡದೇ ಅನ್ಯಾಯವೆಸಗಲಾಗಿದೆ. ಇದನ್ನು ತಕ್ಷಣ ಸರಿಪಡಿಸಬೇಕೆಂದು ಮನವಿ ಮಾಡಿದರು. ಕಳೆದ ತಾ. ೧೬.೦೪.೨೦೨೨ ರಂದು ಜಿಲ್ಲಾಧಿಕಾರಿಗಳು ಗೋಣಿಮರೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಈ ಭಾಗದ ಹಲವಷ್ಟು ಸಮಸ್ಯೆಗಳು ಬಗೆಹರಿಯುವ ಹಂತದಲ್ಲಿವೆ. ಆನೆ ಹಾವಳಿಯಿಂದ ರೈತರ ಬೆಳೆ ರಕ್ಷಿಸಲು ಅರಣ್ಯದಂಚಿನಲ್ಲಿ ಬೃಹತ್ ಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಆರ್ಟಿಸಿಯಲ್ಲಿ ತಿದ್ದುಪಡಿಯಾಗುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಇನ್ನಿತರ ಪಿಂಚಣಿ ಯೋಜನೆಗಳು ಚುರುಕುಗೊಂಡಿವೆ. ಒಟ್ಟಾರೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಶನಿವಾರಸಂತೆ ಮತ್ತು ಸೋಮವಾರಪೇಟೆ ಅರಣ್ಯ ವಲಯ ಗಳೊಂದಿಗೆ ಗಡಿ ಹಂಚಿಕೊAಡಿದ್ದು, ಶನಿವಾರಸಂತೆ ವಲಯ ವ್ಯಾಪ್ತಿಯಲ್ಲಿ ಆನೆಕಂದಕ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆದರೆ ಸೋಮವಾರಪೇಟೆ ವಲಯದಲ್ಲಿ ಇಂದಿಗೂ ಆರಂಭವಾಗಿಲ್ಲ. ತಕ್ಷಣ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕೆAದು ಸಿದ್ಧಲಿಂಗಪ್ಪ ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರುಗಳಾದ ಜಿ.ಎಂ. ಲಿಂಗ ರಾಜು, ಹೆಚ್.ಎಸ್. ಗುಡ್ಡಪ್ಪ, ಜಿ.ಸಿ. ಮಲ್ಲೇಶ್ ಅವರುಗಳು ಉಪಸ್ಥಿತರಿದ್ದರು.