ಸಿದ್ದಾಪುರ, ಜೂ. ೩೦: ದೊಡ್ಡಹಡ್ಲು ಕಲ್ಲಳ್ಳ ಹಾಡಿಯ ಜನರ ಸಮ್ಮುಖದಲ್ಲಿ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್ಐ ಪಿ. ಮೋಹನ್ ರಾಜ್ ಅವರ ನೇತೃತ್ವದಲ್ಲಿ ಎಸ್.ಸಿ., ಎಸ್.ಟಿ. ಸಭೆ ನಡೆಸಿದ್ದು ಸಭೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಕಲ್ಲಳ್ಳ, ದೊಡ್ಡಹಡ್ಲು, ಹಣ್ಣಿನತೋಟ ಹಾಡಿಯ ಮುಖಂಡರುಗಳು ಹಾಗೂ ಮಾಲ್ದಾರೆ ಗ್ರಾಮಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.
ಠಾಣಾಧಿಕಾರಿ ಮೋಹನ್ ಮಾತನಾಡಿ, ಹಾಡಿಯಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಹಲವಾರು ಹಾಡಿ ಮುಖಂಡರುಗಳು ಹಾಡಿಯಲ್ಲಿನ ಶಾಲೆಯ ಮಕ್ಕಳು ಸರಿಯಾದ ರೀತಿ ಶಾಲೆಗೆ ಹೋಗುತ್ತಿಲ್ಲ ಹಾಗೂ ಹಾಡಿಗಳಲ್ಲಿ ಹಲವಾರು ಜನರು ಮದ್ಯ ಸೇವನೆ ಮಾಡಿಕೊಂಡು ವಿನಾಕಾರಣ ಆಗಾಗ್ಗೆ ಜಗಳ ಮಾಡಿಕೊಂಡು ತೊಂದರೆ ಮಾಡುತ್ತಾರೆ ಎಂಬುದಾಗಿ ತಿಳಿಸಿದರು. ಇಂತಹ ಸಂದರ್ಭಗಳಲ್ಲಿ ತುರ್ತು ಸೇವೆ ೧೧೨ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮೋಹನ್ ಅವರು ತಿಳಿಸಿದರು.
ಯುವಕರು ಗಾಂಜಾ ಸೇವನೆಯಿಂದ ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದು ಈ ಸಂಬAಧ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ, ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಗಾಂಜಾ ಗಿಡಗಳನ್ನು ಬೆಳೆಯುವುದು ಕಂಡುಬAದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಮಾದಕ ವ್ಯಸನಿಗಳನ್ನು ಮಟ್ಟ ಹಾಕಲು ಸಹಕರಿಸಬೇಕೆಂದು ಕೋರಿದರು.
ಸಭೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪಾಲಿಬೆಟ್ಟ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಭೀಮಪ್ಪ ಅಜ್ಜೊಡಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಸರಕಾರದ ಯೋಜನೆಗಳಿಗೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಿ ಮಾದಕ ವ್ಯಸನಿಗಳನ್ನು ಹೋಗಲಾಡಿಸಬೇಕೆಂದು ಮನವಿ ಮಾಡಿದರು ಹಾಗೂ ಶಿಕ್ಷಣದ ಕೊರತೆಯಿಂದಾಗಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ದೈನಂದಿನ ಚಲನ-ವಲನದ ಬಗ್ಗೆ ನಿಗಾವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪ್ರೊಬೇಶನರಿ ಪಿ.ಎಸ್.ಐ ಪ್ರಮೋದ ಹೆಚ್.ಎಸ್., ಸಹಾಯಕ ಉಪ ನಿರೀಕ್ಷಕ ಎನ್.ಟಿ. ತಮ್ಮಯ್ಯ, ಪೊಲೀಸ್ ಕಾನ್ಸಟೇಬಲ್ ಗಳಾದ ಮಲ್ಲಪ್ಪ ಮುಶಿಗೇರಿ, ಭರತ್ ಆರ್.ಎಂ., ಗುರುಪ್ರಸಾದ ಹಾಗೂ ಪಿ. ಶಿವಕುಮಾರ್ ಅವರು ಹಾಜರಿದ್ದರು.