ನಾಪೋಕ್ಲು, ಜೂ. ೩೦: ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಪೈಪ್ಲೈನ್ ಅಳವಡಿಸಲು ಚರಂಡಿ ತೆಗೆಯಲಾಗಿದ್ದು, ಮಣ್ಣಿನಿಂದ ಸ್ವಲ್ಪ ಭಾಗ ಮುಚ್ಚಲಾಗಿದೆ. ಪೂರ್ಣ ರಸ್ತೆ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆಯಾಗಿ ಜನಸಾಮಾನ್ಯರು ನಡೆದಾಡಲೂ ಸಾಧ್ಯವಾಗುತ್ತಿಲ್ಲ.
ಬುಧವಾರ ರಭಸದ ಮಳೆ ಸುರಿದಿದ್ದು ಜನರು ಕೆಸರುಮಯ ರಸ್ತೆಯಲ್ಲಿ ಸಾಗುವಂತಾಯಿತು. ವಾಹನಗಳು ಈ ಕೆಸರು ರಸ್ತೆಯಲ್ಲಿ ಸಾಗುವಾಗ ನಡೆದಾಡುವ ಜನರಿಗೆ ಕೆಸರಿನ ಸಿಂಚನವಾಗುತ್ತಿದ್ದು ಕೂಡಲೇ ರಸ್ತೆಯಲ್ಲಿನ ಗುಂಡಿಯನ್ನು ಮುಚ್ಚಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ.