ಗೋಣಿಕೊಪ್ಪಲು, ಜೂ.೨೮: ಗಂಡು ಹುಲಿಯ ಮೃತದೇಹವೊಂದು ಬಿಟ್ಟಂಗಾಲ ಸಮೀಪದ ೨ನೇ ರುದ್ರಗುಪ್ಪೆಯ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದ್ದು ಹುಲಿಗೆ ೭ ರಿಂದ ೮ ವರ್ಷ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಡಿಎಫ್‌ಒ ಶಿವರಾಮಬಾಬು ಹಾಗೂ ಅರಣ್ಯ ಇಲಾಖೆಯ ತಂಡ ಸ್ಥಳಕ್ಕೆ ತೆರಳಿದ್ದು ಮೃತಪಟ್ಟ ಹುಲಿಯ ಸ್ಥಳ ಮಹಜರು ನಡೆಸಿದ್ದಾರೆ.

ಕತ್ತಲೆ ಆವರಿಸಿರುವ ಹಿನ್ನೆಲೆಯಲ್ಲಿ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನದ ಡಾ.ಚಿಟ್ಟಿಯಪ್ಪ ಹಾಗೂ ರಮೇಶ್ ಅವರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ಒದಗಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಹುಲಿಯ ಸಾವಿನ ಬಗ್ಗೆ ಯಾವುದೇ ಮಾಹಿತಿ ಯನ್ನು ಅಧಿಕಾರಿಗಳು ಸ್ಪಷ್ಟಪಡಿಸಲಿಲ್ಲ. ಮೃತಪಟ್ಟ ಗಂಡು ಹುಲಿಯು ಎರಡು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಬಿಟ್ಟಂಗಾಲ ಸಮೀಪದ ೨ನೇ ರುದ್ರಗುಪ್ಪೆಯ ತೋತೇರಿ ಬಳಿಯ ನಾಜಗೊಲ್ಲಿ ಎಂಬಲ್ಲಿನ ಕಾಫಿ ತೋಟವೊಂದರಲ್ಲಿ ಹುಲಿಯ ಮೃತದೇಹ ಪತ್ತೆ ಆಗಿದೆ.

ಕಳೆದ ಮೂರು ತಿಂಗಳ ಹಿಂದೆ ಈ ಭಾಗದಲ್ಲಿ ಹಲವು ಹುಲಿಗಳು ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದವು. ೨ನೇ ರುದ್ರಗುಪ್ಪೆಯ ಸಮೀಪವಿರುವ ಕಂಡAಗಾಲದಲ್ಲಿ ಕರಿಮೆಣಸು ಕುಯ್ಯಲು ಏಣಿಯೊಂದಿಗೆ ತೆರಳುತ್ತಿದ್ದ ವೇಳೆ ಅತ್ತೂರು ಗ್ರಾಮದ ಕಾರ್ಮಿಕ ಮೇಲೆ ದಾಳಿ ನಡೆಸಿ ಆತನನ್ನು ಸ್ಥಳದಲ್ಲೇ ಕೊಂದು ಹಾಕಿತ್ತು.

ನಂತರ ಹುಲಿಯು ಈ ಭಾಗದ ಸುತ್ತಮುತ್ತಲಿನ ಗ್ರಾಮದ ರೈತರ ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಹಸು, ಕರುಗಳನ್ನು ಕೊಂದು ಹಾಕುತ್ತಿತ್ತು. ಹುಲಿಯ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಷ್ಟೇ ಪ್ರಯತ್ನ ನಡೆಸಿದರೂ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಆಗಿಂದಾಗೆ ನಾಗರಿಕರಿಗೆ ಹುಲಿಯು ಕಾಣಿಸಿಕೊಳ್ಳುತ್ತಿತ್ತು. ಹುಲಿಯನ್ನು ಸೆರೆ ಹಿಡಿಯಲೆಂದೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಆದರೆ ಹುಲಿಯ ಸೆರೆಗೆ ಅವಕಾಶ ಆಗಿರಲಿಲ್ಲ.

ಕಾಫಿ ತೋಟದಲ್ಲಿ ಹುಲಿಯು ಸತ್ತು ಬಿದ್ದಿರುವ ಮಾಹಿತಿ ಗ್ರಾಮದ ಜನತೆಗೆ ತಿಳಿಯುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಘಟನಾ ಸ್ಥಳಕ್ಕೆ ದಾವಿಸಿದ್ದರು. ಆದರೆ, ಕಾರ್ಮಿಕನನ್ನು ಈ ಹಿಂದೆ ಕೊಂದಿದ್ದ ಹೆಣ್ಣು ಹುಲಿ ಎಂದು ಗೊತ್ತಾಗಿದ್ದುದರಿಂದ ಈಗ ಸತ್ತಿರುವ ಹುಲಿ ಗಂಡಾಗಿದ್ದು, ಬೇರೆ ಪ್ರಕರಣವೇ ಆಗಿರಬಹುದು, ಹೋರಾಟದಲ್ಲಿ ಮಡಿದಿರಬಹುದು ಎಂದು ಊಹಿಸಲಾಗಿದೆ.

ಸ್ಥಳದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಸಿಎಫ್ ಉತ್ತಪ್ಪ, ಶ್ರೀ ನಿವಾಸ್ ನಾಯ್ಕ, ಆರ್‌ಎಫ್‌ಓ ದೇಚಮ್ಮ, ಶಂಕರ್, ಅಶೋಕ್ ಹುನಗುಂದ, ದಿವಾಕರ್ ಸೇರಿದಂತೆ ಅನೇಕ ಸಿಬ್ಬಂದಿಗಳು ಮೊಖಾಂ ಹೂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

- ಹೆಚ್.ಕೆ.ಜಗದೀಶ್, ರಫೀಕ್ ತೂಚಮಕೇರಿ