ಸೋಮವಾರಪೇಟೆ, ಜೂ. ೨೮: ಪರಂಪರಾಗತವಾಗಿ ಬಂದಿರುವ ನಾಟಿ ವೈದ್ಯಕೀಯ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಔಷಧೀಯ ಗುಣಗಳ ಸಸ್ಯಗಳ ಉದ್ಯಾನವನ ಹಾಗೂ ನಾಟಿ ವೈದ್ಯರ ದಾಖಲೀಕರಣಕ್ಕೆ ಅಕಾಡೆಮಿಯ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಭಿಪ್ರಾಯಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಸೋಮವಾರಪೇಟೆ ಕೊಡವ ಸಮಾಜ ಹಾಗೂ ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜ ಸಭಾಂಗಣ ದಲ್ಲಿ ಆಯೋಜಿಸಿದ್ದ ‘ನಾಡ್‌ಮದ್ದ್ ಕಾರಡ ಮೋಪ್‌ಕೂಟ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಟಿವೈದ್ಯ ಪದ್ಧತಿ ನಡೆಸಿಕೊಂಡು ಬರುತ್ತಿರುವ ಕೊಡಗಿನ ಎಲ್ಲಾ ನಾಟಿ ವೈದ್ಯರ ಹೆಸರು ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಒಳಗೊಂಡAತೆ ದಾಖಲೆಗಳ ಪುಸ್ತಕವನ್ನು ಹೊರತರಲು ಪ್ರಯತ್ನ ಸಾಗಿದೆ. ಇದರೊಂದಿಗೆ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ಲಾಂಟ್ ಮ್ಯೂಸಿಯಂ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.

ನಾಟಿ ಔಷಧಿಯು ಆರೋಗ್ಯದ ಸುಸ್ಥಿತಿಗೆ ಸಹಕಾರಿಯಾಗಿದೆ. ಕೊಡಗಿನ ಪಶ್ಚಿಮಘಟ್ಟ ಹಾಗೂ ದೇವರ ಕಾಡುಗಳಲ್ಲಿ ಯಥೇಚ್ಛ ಔಷಧಿ ಸಸ್ಯಗಳಿವೆ. ಇವುಗಳ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ ಎಂದ ಅವರು, ನಾಟಿ ಔಷಧಿಯೊಂದಿಗೆ ಯೋಗವೂ ಸಹ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಾಟಿ ವೈದ್ಯ ತಜ್ಞ ಡಾ. ಎಸ್.ವಿ. ನರಸಿಂಹನ್ ಮಾತನಾಡಿ, ಸಸ್ಯಗಳಲ್ಲಿ ಹಲವಷ್ಟು ಔಷಧೀಯ ಗುಣಗಳಿದ್ದು, ಕೊಡಗಿನ ಹಸಿರು ವನಗಳನ್ನು ಸಂರಕ್ಷಿಸಬೇಕಿದೆ. ಕೊಡಗು ಹಾಗೂ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಅಮೂಲ್ಯವಾದ ಔಷಧೀಯ ಸಸ್ಯಗಳಿವೆ. ಶೇ.೭೮ರಷ್ಟು ಔಷಧಿಗಳು ಸಸ್ಯಗಳಿಂದಲೇ ತಯಾರಾಗುತ್ತವೆ ಎಂದರು.

ಕೊಡಗಿನ ಪರಿಸರ ಉಳಿಯಬೇಕಿದೆ. ಹಣದಿಂದಲೇ ಎಲ್ಲವೂ ಸಾಧ್ಯ ಎಂಬ ಮೊಂಡುವಾದ ಬಿಟ್ಟು, ಪ್ರಕೃತಿಯೊಂದಿಗೆ ಜೀವಿಸುವು ದನ್ನು ಅಳವಡಿಸಿಕೊಳ್ಳಬೇಕೆಂದು ನರಸಿಂಹನ್ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಅವರು, ನಾಟಿ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ. ಜನರು ಆಸ್ಪತ್ರೆಗೆ ತೆರಳುವ ದಾವಂತದಲ್ಲಿದ್ದಾರೆ. ಕ್ಯಾನ್ಸರ್‌ಗೆ ಆಧುನಿಕ ವೈದ್ಯ ಪದ್ಧತಿಯಲ್ಲಿ ಔಷಧಿ ಇಲ್ಲ; ಆದರೆ ನಾಟಿ ಪದ್ಧತಿಯಿಂದ ಮನುಷ್ಯನ ಆಯಸ್ಸನ್ನು ಹೆಚ್ಚಿಸಬಹುದಾಗಿದೆ. ನಾಟಿ ವೈದ್ಯರಿಗೆ ಸರ್ಕಾರವೂ ಸಹ ಪ್ರೋತ್ಸಾಹ ನೀಡಬೇಕಿದೆ ಎಂದರು.

ಕೊಡವ ಸಂಸ್ಕೃತಿ ಅಂದು-ಇAದು ಎಂಬ ಕೃತಿಯನ್ನು ಬಿಡುಗಡೆ ಗೊಳಿಸಿದ ಲೇಖಕಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಕೊಡಗಿನ ಮಂದಿ ಪ್ರಕೃತಿಯ ಪೂಜಕರಾಗಿದ್ದಾರೆ. ಕೊಡವರಿಗೆ ಕಾರೋಣವೇ ಪ್ರಧಾನ ದೈವ, ಐನ್‌ಮನೆಗಳೇ ದೇವಾಲಯ ಎಂಬ ನಂಬಿಕೆ ಹೊಂದಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ವಿಶಿಷ್ಟ ಸಂಸ್ಕೃತಿಯೂ ಬದಲಾಗುತ್ತಿದೆ. ಇದಕ್ಕೆ ಕೊಡವ ಸಮುದಾಯ ಅವಕಾಶ ನೀಡದೇ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ಹಲವಷ್ಟು ನಾಟಿ ವೈದ್ಯರು ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿ ರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಟಿ ವೈದ್ಯರುಗಳಾದ ಪಾಲಿಬೆಟ್ಟದ ಕರವಟ್ಟೀರ ಅಯ್ಯಣ್ಣ, ಕಕ್ಕಬ್ಬೆಯ ಸಂತು ಸುಬ್ರಮಣಿ, ಮುದ್ದಿನಾಡಂಡ ಯಮುನ, ನಂದಕುಮಾರ್, ಚಿತ್ರಾವತಿ, ಬಾಳೆಯಡ ಮೀನಾಕುಮಾರಿ, ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರುಗಳು ಮಾತನಾಡಿ, ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿಯಾಗುವ ಔಷಧೀಯ ಸಸ್ಯಗಳು ಹಾಗೂ ನಾಟಿ ವೈದ್ಯರ ಬಗ್ಗೆ ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಕುಶಾಲನಗರದ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಬರೆದಿರುವ ಕೊಡವ ಸಂಸ್ಕೃತಿ ಅಂದ್-ಇAದ್ ಸಂಶೋಧನಾ ಪುಸ್ತಕ ಹಾಗೂ ಪೊಂಗುರಿ ತ್ರೆöÊ ಮಾಸಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಅಜ್ಜಿಕುಟ್ಟೀರ ಸಿ. ಗಿರೀಶ್ ಉಪಸ್ಥಿತರಿದ್ದರು. ಸಂಚಾಲಕ ತೇಲಪಂಡ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.