ಸಿದ್ದಾಪುರ, ಜೂ. ೨೮: ವಿದ್ಯಾರ್ಥಿಗಳು ಯಾವುದೇ ಧರ್ಮಗಳ ಬಗ್ಗೆ ಆಸಕ್ತಿ ವಹಿಸದೆ ತಮ್ಮ ವಿದ್ಯಾಭ್ಯಾಸದ ಕಡೆ ಆಸಕ್ತಿ ವಹಿಸ ಬೇಕೆಂದು ಸಂಸದ ಪ್ರತಾಪ ಸಿಂಹ ಕಿವಿಮಾತು ಹೇಳಿದರು. ನೆಲ್ಲಿಹುದಿಕೇರಿ ಪದವಿಪೂರ್ವ ಕಾಲೇಜಿನ ನೂತನ ಕೊಠಡಿಗಳನ್ನು ಉದ್ಘಾಟಿಸಿ ಬಳಿಕ ಪ್ರೌಢಶಾಲಾ ಆವರಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಿಜಾಬ್ ಆಗಲೀ ಕೇಸರಿ ಶಾಲುಗಳನ್ನು ಧರಿಸಿಕೊಂಡು ಶಾಲೆಗೆ ಬರುವುದು ಸರಿಯಾದ ಕ್ರಮವಲ್ಲ ಎಂದರು. ತಾನೂ ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ರಾಷ್ಟçದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಇಂಜಿನಿಯರ್ ವಿಶ್ವೇಶ್ವರಯ್ಯ ಸೇರಿದಂತೆ ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಪದವಿಯಲ್ಲಿ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಪೋಷಕರ ಕಷ್ಟವನ್ನು ತಿಳಿದುಕೊಂಡು ವ್ಯಾಸಂಗದ ಬಳಿಕ ತಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಹಾಗೂ ಉದ್ಯೋಗಕ್ಕೆ ಸೇರಿ ಸ್ವತಂತ್ರವಾಗಿ ತಮ್ಮ ಕಾಲ ಮೇಲೆ ನಿಲ್ಲಬೇಕೆಂದು ಸಲಹೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ಭಾಗದ ಅಲ್ಪಸಂಖ್ಯಾತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪೋಷಕರು ಮಕ್ಕಳಿಗೆ ಶಾಲೆಯ ಒಳಗೆ ಬರುವಾಗ ಹಿಜಾಬ್ ಧರಿಸದಂತೆ ಸೂಚನೆ ನೀಡಬೇಕೆಂದು ಸಲಹೆ ನೀಡಿದರು. ಮಕ್ಕಳು ಆಂಗ್ಲ ಭಾಷೆಯನ್ನು ಕೂಡ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ನೆಲ್ಲಿಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವನ್ನು ಪ್ರಾರಂಭಿಸಲಾಗಿದೆಯೆAದು ತಿಳಿಸಿದರು. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಬರುವಂತೆ ವಿದ್ಯಾರ್ಥಿಗಳು ಶ್ರಮಪಡಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಈ ಹಿಂದೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆಂಚಪ್ಪ ಅವರನ್ನು ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ರಂಜನ್ ಸನ್ಮಾನಿಸಿ, ಗೌರವಿಸಿ ದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಪಾಲಚಂಡ ಅಚ್ಚಯ್ಯ, ಕೆ.ಪಿ.ಎಸ್. ಶಾಲಾ ಪ್ರಾಂಶುಪಾಲ ಆಂಟೋನಿ ಆಲ್ವರೀಸ್, ಉಪನ್ಯಾಸಕರುಗಳಾದ ಜೆಸ್ಟಿನ್ ಕೊರಿಯಾ, ಲೋಕೇಶ್, ಜ್ಯೋತಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಅನಿಲ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಹಾಗೂ ಶಿಕ್ಷಕರು ಹಾಜರಿದ್ದರು.