ಸೋಮವಾರಪೇಟೆ, ಜೂ. ೨೭: ತನ್ನ ಇಪ್ಪತ್ತೇಳನೆ ವಯಸ್ಸಿನಲ್ಲಿ ಕ್ರಿ.ಶ. ೧೫೩೭ರಲ್ಲಿ ಬೆಂಗಳೂರು ಮಹಾನಗರ ನಿರ್ಮಾಣಕ್ಕೆ ನಾಂದಿ ಹಾಡುವ ಮೂಲಕ ಆಧುನಿಕ ನಾಗರಿಕತೆಗೆ ಅಸ್ಥಿಭಾರ ಹಾಕಿದ ಮಹಾನ್ ನಾಯಕ ಕೆಂಪೇಗೌಡ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಬಣ್ಣಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ತನ್ನ ಇಪ್ಪತ್ತೆರಡನೆ ವಯಸ್ಸಿನಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಗಾರರಾಗಿದ್ದ ನಾಡಪ್ರಭು ಕೆಂಪೇಗೌಡರು ಜನರ ಕಲ್ಯಾಣಕ್ಕಾಗಿ ಅದ್ಭುತವಾಗಿ ಬೆಂಗಳೂರು ಮಹಾ ನಾಡನ್ನು ಕಟ್ಟಿದರು. ಕೆಂಪೇಗೌಡರ ಆಡಳಿತದಲ್ಲಿ ಉದಾರೀಕರಣ, ಪ್ರಜಾವಾತ್ಸಲ್ಯ, ಪರೋಪಕಾರ ಕಾಣುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಹಂಪೆಯ ವೈಭೋಗವನ್ನು ಗಮನಿಸಿ, ಇಂತಹ ನಗರವನ್ನು ಕಟ್ಟಲೇಬೇಕು ಎಂದು ಸಂಕಲ್ಪ ಮಾಡಿ ಬೆಂಗಳೂರನ್ನು ಅದ್ಭುತವಾಗಿ ಕಟ್ಟಿದ್ದರು. ಇಂದು ದೇಶದ ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಕೋಟ್ಯಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಇದರ ಹೆಗ್ಗಳಿಕೆ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ಒಕ್ಕಲುತನಕ್ಕೆ ಪ್ರಾಧಾನ್ಯತೆ ನೀಡಿದರು. ಪರಿಸರ ಕಾಪಾಡಲು ಯೋಜನೆ ರೂಪಿಸಿದರು. ಸಾಕಷ್ಟು ಉದ್ಯಮಗಳನ್ನು ಸ್ಥಾಪಿಸಿದರು. ಕೆರೆಕಟ್ಟೆಗಳನ್ನು ಕಟ್ಟಿದರು. ಕುಲಕಸುಬು ಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಗೋವಿಂದರಾಜು, ಬೆಂಗಳೂರನ್ನು ಕಟ್ಟಿ ಬೆಳೆಸಿದ ಸಾಂಸ್ಕೃತಿಕ ನಾಯಕರಾದ ಕೆಂಪೇಗೌಡರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಅವರು ಬಾಲ್ಯದಲ್ಲಿ ಕಲಿತ ಮೌಲ್ಯಾಧಾರಿತ ಶಿಕ್ಷಣದಿಂದ ಅವರ ಬದುಕು ಸಾರ್ಥಕವಾಯಿತು. ಅಪಾರ ಜ್ಞಾನವನ್ನು ಜನರ, ನಿರ್ಗತಿಕ ಸೇವೆಗೆ, ಜನಪರ ಕೆಲಸಗಳಿಗೆ ಮುಡಿಪಾಗಿಟ್ಟರು. ಅವರ ಜನಪರ ಯೋಜನೆಗಳು ಇಂದಿನ ತಲೆಮಾರಿಗೂ ತಲುಪಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಅಧ್ಯಕ್ಷ ಎ.ಆರ್. ಮುತ್ತಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ ಇದ್ದರು. ಕಲಾವಿದ ಗಣೇಶ್ ತಂಡದವರಿAದ ಗಾಯನ ಕಾರ್ಯಕ್ರಮ ನಡೆಯಿತು. ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.