ಚೆಟ್ಟಳ್ಳಿ, ಜೂ. ೨೭: ಚೆಟ್ಟಳ್ಳಿ ಗ್ರಾಮಪಂಚಾಯಿತಿಗೆ ಒಳಪಡುವ ವಳಮುಡಿ ಗ್ರಾಮದಲ್ಲಿ ಒಂದು ಎಕರೆ ಜಾಗವನ್ನು ಸಾರ್ವಜನಿಕರ ಸ್ಮಶಾನ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ವಳಮುಡಿ ಗ್ರಾಮದ ಸರ್ವೆ ನಂ.೨೮/೧ರಲ್ಲಿ ೪.೬೮ ಎಕರೆ ಪಹಣಿಯಂತೆ ಕಾಲಂ ೯ರಲ್ಲಿ ಸರಕಾರದ ಹೆಸರಿನಲ್ಲಿದ್ದು, ಕಾಲಂ ೬ ರ ನಿಬಂಧನೆಯAತೆ ಪೈಸಾರಿ ಜಾಗವಾಗಿದೆ. ಈ ಜಾಗವನ್ನು ಕರ್ನಾಟಕ ಭೂಕಂದಾಯ ಕಾಯ್ದೆ-೧೯೬೪ರ ಕಲಂ ೭೧ರನ್ವಯ ಒಂದು ಏಕರೆ ಜಾಗವನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸ್ವಾಧೀನಪಡಿಸಿಕೊಂಡು ಯಾವ ಉದ್ದೇಶಕ್ಕೆ ಬಳಕೆಯಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬ ಆದೇಶ ಪ್ರತಿಯನ್ನು ಕಳೆದ ಬಾರಿ ಚೆಟ್ಟಳ್ಳಿಯ ಶ್ರೀನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಗ್ರಾಮದೆಡೆ ಕಾರ್ಯಕ್ರಮದಲ್ಲಿ ನೀಡಲಾಯಿತು.
ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಾ. ೨೩ರಂದು ಕುಶಾಲನಗರ ತಾಲೂಕಿನ ತಹಶೀಲ್ದಾರರಿಗೆ ಅತೀ ಶೀಘ್ರದಲ್ಲಿ ಹದ್ದು ಬಸ್ತು ಸರ್ವೆನಡೆಸಿ ಕೊಡುವ ಮೂಲಕ ಜಾಗವನ್ನು ಗುರುತಿಸಿಕೊಡಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಸರ್ವೆ ಕಾರ್ಯ ಮುಗಿದಂತೆ ಅನುದಾನದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯ ನಡೆಸಲಾಗುವುದೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಹೇಳುತ್ತಾರೆ.
ಪ್ರತೀ ಗ್ರಾಮದಲ್ಲೂ ಸಾರ್ವಜನಿಕ ಸ್ಮಶಾನವಿರಬೇಕೆಂಬ ನಿಯಮದಂತೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅರಣ್ಯದ ಅಂಚಿನಲ್ಲಿರುವ ಕಂಡಕರೆ ವ್ಯಾಪ್ತಿಯ ಜಾಗವು ಹಲವು ವರ್ಷಗಳಿಂದ ಸಾರ್ವಜನಿಕ ಸ್ಮಶಾನ ವಾಗಿ ಬಳಕೆಯಾಗುತ್ತಿದ್ದು, ಕಳೆದ ಐದಾರು ತಿಂಗಳ ಹಿಂದೆ ಸಾರ್ವಜನಿಕರು ಸಮಿತಿಯೊಂದನ್ನು ರಚಿಸಿ ಹಲವು ಸಂಸ್ಥೆಗಳ ಹಾಗೂ ಸಾರ್ವಜನಿಕರ ದೇಣಿಗೆ ಹಾಗೂ ಪಂಚಾಯಿತಿಯ ಅನುದಾನದಲ್ಲಿ ನೂತನ ಮಾದರಿಯ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಕೂಡ್ಲೂರು ಚೆಟ್ಟಳ್ಳಿಯಲ್ಲೂ ಸ್ಮಶಾನ ಜಾಗವಿದ್ದು, ಹದ್ದುಬಸ್ತು ಗುರುತಿಸಿ ಅಭಿವೃದ್ಧಿ ಕಾರ್ಯ ಆಗಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಿವೇಶನ ರಹಿತರಿಗೆ ಮನೆ ನಿರ್ಮಾಣಕ್ಕೆ ಮನವಿ
ವಳಮುಡಿ ಗ್ರಾಮದ ೨೮/೧ ರಲ್ಲಿರುವ ೪.೬೮ ಜಾಗದಲ್ಲಿ ಒಂದು ಎಕರೆ ಸಾರ್ವಜನಿಕ ಸ್ಮಶಾನ ಜಾಗಕ್ಕೆ ಮಂಜೂರಾದರೆ ಇನ್ನುಳಿದ ಜಾಗವನ್ನು ನಿವೇಶನ ರಹಿತರಿಗೆ ಮಂಜೂರು ಮಾಡಲು ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಾಗ ಮಂಜೂರಿಗಾಗಿ ಮನವಿ ಮಾಡುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ ಹೇಳುತ್ತಾರೆ.
-ಪುತ್ತರಿರ ಕರುಣ್ ಕಾಳಯ್ಯ