ಚೆಟ್ಟಳ್ಳಿ, ಜೂ. ೨೭: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮೈಸೂರು ಘಟಕದಿಂದ ಪ್ರಾರಂಭಿಸಲಾಗಿರುವ ಫೀ.ಮಾ. ಕಾರ್ಯಪ್ಪ ಪ್ರಶಸ್ತಿಯನ್ನು ಕೊಡಗಿನ ನಿವೃತ್ತ ಸೈನಿಕರಾದ ಕೊಟ್ಟುಕತ್ತಿರ ಸೋಮಣ್ಣ ಹಾಗೂ ಕುಂಡ್ರAಡ ಸುರೇಶ್ ಬೋಪಣ್ಣ ಅವರಿಗೆ ನೀಡಿ ಗೌರವಿಸಲಾಯಿತು. ಮೈಸೂರಿನಲ್ಲಿ ಸಂಘದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಯಿತು.
೧೯೪೮ರಲ್ಲಿ ಕೋಪಟ್ಟಿಯಲ್ಲಿ ಕೊಟ್ಟುಕತ್ತಿರ ಪೊನ್ನಪ್ಪ ಅಕ್ಕವ್ವ ದಂಪತಿಯ ಪುತ್ರರಾಗಿ ಜನಿಸಿ ೧೯೬೬ರಲ್ಲಿ ಭಾರತೀಯ ನೌಕಾ ಸೇನೆಗೆ ಸೇರಿ ೧೯೭೧ ಇಂಡೋ ಪಾಕ್ ಯುದ್ಧದಲ್ಲಿ ಅವರ ಇಬ್ಬರು ಹಿರಿಯ ಸೋದರರೊಡನೆ ಭಾಗವಹಿಸಿ ೧೯೭೬ರಲ್ಲಿ ನಿವೃತ್ತಿ ಹೊಂದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ಸೇರಿ ೨೦೦೮ರಲ್ಲಿ ಚೀಫ್ ಮೇನೇಜರ್ ಆಗಿ ನಿವೃತ್ತಿ ಹೊಂದಿರುವ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಪ್ರಸ್ತುತ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲೆಯ ಅಧ್ಯಕ್ಷ ಹಾಗೂ ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕರ ವೇದಿಕೆ ಪೊನ್ನಂಪೇಟೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಂಡ್ರAಡ ನಾಣಯ್ಯ ತಾಯಕ್ಕಿ ದಂಪತಿಯ ಪುತ್ರ ಐಮಂಗಲ ಗ್ರಾಮದ ಕುಂಡ್ರAಡ ಸುರೇಶ್ ಬೋಪಣ್ಣ ಅವರು ೧೯೭೩ರಲ್ಲಿ ಜನಿಸಿ ೧೯೯೩ರಲ್ಲಿ ಭಾರತೀಯ ಸೇನೆಯ ಆರ್ಮ್ಡ್ ಕೋರ್ಗೆ ಸೇರಿ ೨೦೧೦ರಲ್ಲಿ ನಿವೃತ್ತಿ ಹೊಂದಿ ೨೦೧೦ ರಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದು ಪ್ರಸ್ತುತ ಇಲವಾಲ ಠಾಣೆಯಲ್ಲಿ ಸೇವೆಯಲ್ಲಿದ್ದಾರೆ.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮೈಸೂರಿನ ವಿವೇಕಾನಂದ ನಗರದ ನಾಗಮ್ಮ ಕಲ್ಯಾಣ ಭವನದಲ್ಲಿ ನಡೆದ ಸಂಘದ ವಾರ್ಷಿಕ ಸಭೆ ಕಾರ್ಯಕ್ರಮದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರಿನ ಹಾಲಿ ಶಾಸಕ ಸಿ.ಎನ್. ಮಂಜೇಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಸಂಘದ ವಾರ್ಷಿಕ ಮಹಾಸಭೆಯ ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈಸೂರಿನ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಕೆ.ಪಿ. ದಿವಾಕರ್, ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಂಜುAಡಸ್ವಾಮಿ, ಜಂಟಿ ಕಾರ್ಯದರ್ಶಿ ಧರ್ಮೇಂದ್ರ ಬಿ.ಕೆ, ಸಹ ಕಾರ್ಯದರ್ಶಿ ದೇವರಾಜು ಡಿ.ಬಿ, ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಮಾರ್, ಖಜಾಂಚಿ ಜೀವನ್, ಲಾಲೂ ಕುಮಾರ್ ಕಡ್ಯದ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನೂರಾರು ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಸೈನಿಕರು, ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.